ಕತಿಹಾರ್ (ಬಿಹಾರ): ತಂದೆಯೋರ್ವ ತನ್ನ ಮೂವರು ಮಕ್ಕಳನ್ನು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿ, ಬಳಿಕ ತಾನೂ ಬೆಂಕಿ ಹಚ್ಚಿಕೊಂಡ ಘಟನೆ ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಮೂವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಆರೋಪಿ ತಂದೆ ಗಂಭೀರವಾಗಿ ಸುಟ್ಟು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ಗುಂಪು ಸಾಲ ಪಡೆದು ಪರಾರಿಯಾದ ಕಾರಣ ಮನನೊಂದ ಈ ವ್ಯಕ್ತಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ಬಂದಿದ್ದಾನೆ ಎಂದೂ ವರದಿಯಾಗಿದೆ.
ಇಲ್ಲಿನ ಕಡ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಜಾಜಾ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ. ಮೃತ ಮಕ್ಕಳು 8 ವರ್ಷದಿಂದ 12 ವರ್ಷ ವಯಸ್ಸಿನವರಾಗಿದ್ದು, ಅದರಲ್ಲಿ ಒಬ್ಬ ಬಾಲಕಿ ಸಹ ಸೇರಿದ್ದಾಳೆ. ಮತ್ತೊಂದೆಡೆ, ತಂದೆಯ ಸ್ಥಿತಿ ಚಿಂತಾಜನಕವಾಗಿದೆ. ಈ ಮೂವರು ಮಕ್ಕಳಿಗೆ ತಂದೆ ಬೆಂಕಿ ಹಚ್ಚಿ, ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ. ಈ ಬೆಂಕಿ ಹೊತ್ತಿಕೊಂಡ ತಕ್ಷಣ ಮೂವರು ಮಕ್ಕಳು ನೋವಿನಿಂದ ಒದ್ದಾಡತೊಡಗಿದ್ದರು. ಮಕ್ಕಳ ಚೀರಾಟ ಕೇಳಿದ ಸ್ಥಳೀಯ ಜನರು ಓಡಿ ಬಂದಿದ್ದಾರೆ. ಆದರೆ, ರಕ್ಷಿಸಲು ಸಾಧ್ಯವಾಗದೆ ಮಕ್ಕಳು ಸುಟ್ಟು ಕರಕಲಾಗಿದ್ದಾರೆ. ನಂತರ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿದಿಲ್ಲ ಎಂದು ತಿಳಿದು ಬಂದಿದೆ.