ಚಂಡೀಗಢ: ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಗ್ಯಾರಂಟಿ ನೀಡುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ 'ದಿಲ್ಲಿ ಚಲೋ' ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪಂಜಾಬ್-ಹರಿಯಾಣ ಶಂಭು ಗಡಿಯಲ್ಲಿ ತೀವ್ರ ಸ್ವರೂಪ ತಾಳಿದೆ. ರೈತರನ್ನು ಚದುರಿಸಲು ಪೊಲೀಸರು ಡ್ರೋನ್‌ಗಳ ಮೂಲಕ ಅಶ್ರುವಾಯು ಪ್ರಯೋಗಕ್ಕೆ ಮುಂದಾಗಿದ್ದು, ಅದಕ್ಕೆ ಪ್ರತಿಯಾಗಿ ರೈತರು ಗಾಳಿಪಟ ಹಾರಿಸುತ್ತಿದ್ದಾರೆ. ಡ್ರೋನ್‌ಗಳನ್ನು ಕಟ್ಟಿಹಾಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿದೆ.
ಪ್ರತಿಭಟನಾಕಾರರು ರಾಷ್ಟ್ರ ರಾಜಧಾನಿಗೆ ನುಗ್ಗದಂತೆ ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಹರಿಯಾಣ ಪೊಲೀಸರು, ರೈತರ ಮೇಲೆ ಅಶ್ರುವಾಯು ಸಿಡಿಸಲು ಡ್ರೋನ್‌ಗಳನ್ನು ಬಳಸುತ್ತಿದ್ದಾರೆ. ಈ ಡ್ರೋನ್‌ಗಳಿಗೆ ತಡೆಯೊಡ್ಡಲು ರೈತರು ಪ್ರತಿಯಾಗಿ ಗಾಳಿ ಪಟಗಳನ್ನು ಹಾರಿಸುತ್ತಿರುವುದು ಕಂಡುಬಂದಿದೆ. ಬುಧವಾರ ಬಸಂತ್ ಪಂಚಮಿ ಆಚರಣೆಯ ಅಂಗವಾಗಿ, ರೈತರು ಗಾಳಿಪಟ ಹಾರಿಸಿದರು. ಡ್ರೋನ್‌ಗಳನ್ನು ಸಿಕ್ಕಿಹಾಕಿಸಲು ಗಾಳಿಪಟಗಳಿಗೆ ಉದ್ದನೆಯ ತೆಳುವಾದ ತಂತಿಗಳನ್ನು ಸಹ ಬಳಸಿದ್ದು ಕಂಡು ಬಂದಿದೆ. ಕೇವಲ 10 ರೂಪಾಯಿ ಮೌಲ್ಯದ ಗಾಳಿಪಟದಿಂದ ಲಕ್ಷಗಟ್ಟಲೆ ಬೆಲೆಬಾಳುವ ಹರಿಯಾಣ ಪೊಲೀಸರ ಡ್ರೋನ್ ಅನ್ನು ಸಿಕ್ಕಿಹಾಕಿಸಿ ಉರುಳಿಸಿದ್ದೇವೆ ಎಂದು ರೈತರು ಹೇಳಿಕೊಂಡಿದ್ದಾರೆ.
ಆದರೆ, ಹರಿಯಾಣ ಪೊಲೀಸರು ಡ್ರೋನ್‌ಗಳನ್ನು ರೈತರು ಉರುಳಿಸುವ ವರದಿಗಳನ್ನು ಖಚಿತಪಡಿಸಿಲ್ಲ. ಒಂದೆಡೆ ಡ್ರೋನ್ ಮೂಲಕ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಪೊಲೀಸರು ನಿರಂತರವಾಗಿ ನಿಗಾ ಇರಿಸಿದ್ದರೆ, ಪ್ರತಿಯಾಗಿ ರೈತರು ಹಲವು ಹಂತದ ಬ್ಯಾರಿಕೇಡ್‌ಗಳನ್ನು ಭೇದಿಸಲು ಮುಂದಾಗಿದ್ದಾರೆ.
ಡ್ರೋನ್‌ಗಳ ಬಗ್ಗೆ ಆಕ್ಷೇಪ:ಗಡಿಗಳಲ್ಲಿ ಡ್ರೋನ್ ಬಳಕೆಗೆ ಸಂಬಂಧಿಸಿದಂತೆ ಪಂಜಾಬ್ ಮತ್ತು ಹರಿಯಾಣದ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ. ಹರಿಯಾಣ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದಕ್ಕೆ ಪಂಜಾಬ್ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಂಜಾಬ್‌ನ ಪಟಿಯಾಲದ ಡೆಪ್ಯುಟಿ ಕಮಿಷನರ್ ಶೌಕತ್ ಅಹ್ಮದ್ ಪರ್ರೆ ಅವರು ಅಂಬಾಲಾದ ಡೆಪ್ಯೂಟಿ ಕಮಿಷನರ್‌ಗೆ ಪತ್ರ ಬರೆದಿದ್ದು, ಶಂಭು ಗಡಿಯಲ್ಲಿರುವ ಪಂಜಾಬ್ ಪ್ರದೇಶದೊಳಗೆ ತಮ್ಮ ಡ್ರೋನ್‌ಗಳನ್ನು ಕಳುಹಿಸದಂತೆ ಸೂಚನೆ ನೀಡಿದ್ದಾರೆ. ಪಂಜಾಬ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಪಂಜಾಬ್‌ನ ಈ ಸೂಚನೆ ಬಗ್ಗೆ ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಕಿಡಿಕಾರಿದ್ದಾರೆ. "ನಮ್ಮ ಗಡಿಗೆ ಡ್ರೋನ್‌ಗಳನ್ನು ಕಳುಹಿಸಬೇಡಿ ಎಂದು ಪಂಜಾಬ್ ಸರ್ಕಾರ ನೋಟಿಸ್ ನೀಡಿರುವುದು ತನಗೆ ತುಂಬಾ ಆಶ್ಚರ್ಯ ತರಿಸಿದೆ. ಇದು ಭಾರತ-ಪಾಕಿಸ್ತಾನ ಆಗಿಬಿಟ್ಟಿತೇ?. ನಮ್ಮ ಪೊಲೀಸರ ಮೇಲೆ ದಾಳಿ ಮಾಡಿ ಯಾರಾದರೂ ಪಂಜಾಬ್‌ಗೆ ಓಡಿಹೋದರೆ, ನಾವು ಅವನನ್ನು ಬೆನ್ನಟ್ಟಿ ಹಿಡಿಯಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಕಿಡಿ: ಇದು ಇಸ್ರೇಲ್ ಅಲ್ಲ, ಗಾಜಾ ಪಟ್ಟಿಯೂ ಅಲ್ಲ, ಇದು ಪಾಕಿಸ್ತಾನ, ಚೀನಾ ಗಡಿಯೂ ಅಲ್ಲ. ಪ್ರತಿಭಟನಾಕಾರರು ಉಗ್ರರೂ ಅಲ್ಲ, ದರೋಡೆಕೋರರೂ ಅಲ್ಲ. ದೆಹಲಿಯಲ್ಲಿ ಪ್ರತಿಭಟನೆಗೆ ಬರುತ್ತಿರುವ ರೈತರನ್ನು ಹತ್ತಿಕ್ಕಲು ಮೋದಿ ಸರ್ಕಾರ ಡ್ರೋನ್ ಮೂಲಕ ದಾಳಿ ಮಾಡುತ್ತಿದೆ. ಈ ಟೆಕ್ನಾಲಜಿಯ ಭದ್ರತೆಯನ್ನು ಪಾಕ್ ಗಡಿಯಲ್ಲಿ ಬಳಸಿದ್ದರೆ ನಮ್ಮ ಯೋಧರ ಜೀವ ಉಳಿಯುತ್ತಿತ್ತು. ಚೀನಾ ಗಡಿಯಲ್ಲಿ ಬಳಸಿದ್ದರೆ ಭಾರತದ ನೆಲದ ಆತಿಕ್ರಮಣವನ್ನು ತಡೆಯಬಹುದಿತ್ತು ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಎಕ್ಸ್ನಲ್ಲಿ ಕಿಡಿಕಾರಿದೆ.
ಇದನ್ನೂ ಓದಿ: ರೈತರ ದೆಹಲಿ ಚಲೋ: ಕೇಂದ್ರದ ಜೊತೆ ಇಂದು ಮೂರನೇ ಸುತ್ತಿನ ಸಭೆ, ರೈಲು ತಡೆ ಎಚ್ಚರಿಕೆ