ಚಂಡೀಗಢ:ರಾಜ್ಯದರೈತರು ಫೆಬ್ರವರಿ 13ರಂದು ನಡೆಸಲಿರುವ 'ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆಗೂ ಮುನ್ನವೇ ಏಳು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಸಗಟು ಎಸ್‌ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಿ ಹರಿಯಾಣ ಸರ್ಕಾರ ಶನಿವಾರ ಆದೇಶಿಸಿದೆ. ಅಧಿಕೃತ ಆದೇಶದಂತೆ, ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳಲ್ಲಿ ಫೆಬ್ರವರಿ 11ರಂದು ಬೆಳಿಗ್ಗೆ 6ರಿಂದ ಫೆಬ್ರವರಿ 13ರ ಮಧ್ಯಾಹ್ನ 11.59 ರವರೆಗೆ ಈ ಸೇವೆಗಳು ಇರುವುದಿಲ್ಲ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ 200ಕ್ಕೂ ಹೆಚ್ಚು ರೈತ ಸಂಘಟನೆಗಳು ದೆಹಲಿ ಚಲೋಗೆ ಕರೆ ಕೊಟ್ಟಿವೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದು ಹಾಗೂ ಇದನ್ನು ಖಾತರಿಪಡಿಸಲು ಕಾನೂನು ಜಾರಿಗೆ ತರುವಂತೆ ರೈತರು ಆಗ್ರಹಿಸುತ್ತಿದ್ದಾರೆ.
''ದೆಹಲಿ ಚಲೋ ಗಮನದಲ್ಲಿಟ್ಟುಕೊಂಡು ಶಾಂತಿ ಕದಡುವ ಆತಂಕದ ಕಾರಣ ಮೊಬೈಲ್ ಇಂಟರ್ನೆಟ್, ಎಸ್‌ಎಂಎಸ್ ಮತ್ತು ಎಲ್ಲಾ ಡಾಂಗಲ್ ಸೇವೆಗಳನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳಲ್ಲಿ ಉದ್ವಿಗ್ನತೆ, ಆಂದೋಲನ, ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಹಾನಿ ಮತ್ತು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟಾಗುವುದನ್ನು ತಡೆಯಲು ಕ್ರಮವಹಿಸಲಾಗಿದೆ. ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ತಪ್ಪು ಮಾಹಿತಿ ಮತ್ತು ವದಂತಿ ಹರಡುವುದನ್ನು ತಡೆಯಲು ಈ ಕ್ರಮಗಳು ಅನಿವಾರ್ಯವಾಗಿದೆ'' ಎಂದು ಹರಿಯಾಣ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ ಇಲಾಖೆ) ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ವೈಯಕ್ತಿಕ ಎಸ್‌ಎಂಎಸ್, ಮೊಬೈಲ್ ರೀಚಾರ್ಜ್, ಬ್ಯಾಂಕಿಂಗ್ ಎಸ್‌ಎಂಎಸ್, ಧ್ವನಿ ಕರೆಗಳು, ಬ್ರಾಡ್‌ಬ್ಯಾಂಡ್ ಮತ್ತು ಕಾರ್ಪೊರೇಟ್ ಮತ್ತು ದೇಶೀಯ ಕುಟುಂಬಗಳ ಲೀಸ್ ಲೈನ್‌ಗಳು ಒದಗಿಸುವ ಇಂಟರ್ನೆಟ್ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ರಾಜ್ಯದ ಆರ್ಥಿಕ ಹಿತಾಸಕ್ತಿ ಮತ್ತು ವ್ಯಕ್ತಿಗಳ ಮೂಲಭೂತ ದೇಶೀಯ ಅಗತ್ಯಗಳಿಗೆ ಯಾವುದೇ ತೊಂದರೆಯಾಗದಂತೆ ಕಾಳಜಿ ವಹಿಸಲಾಗಿದೆ ಎಂದು ಆದೇಶದಲ್ಲಿ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ:ಲೋಕಸಭೆ ಚುನಾವಣೆಗೂ ಮೊದಲೇ ಸಿಎಎ ಜಾರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ