ಅಂಬಾಲಾ (ಹರಿಯಾಣ):ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಕುರಿತ ಸರ್ಕಾರದ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ್ದಾರೆ. ಇದರಿಂದ ರೈತರು ಮತ್ತು ಕೇಂದ್ರ ಸರ್ಕಾರದ ಮಧ್ಯೆ ನಡೆದ ನಾಲ್ಕನೇ ಸುತ್ತಿನ ಮಾತುಕತೆಯೂ ಯಾವುದೇ ಫಲಿತಾಂಶವಿಲ್ಲದೇ ಅಂತ್ಯವಾಗಿದೆ. ಫೆಬ್ರವರಿ 21 ರಂದು ದೆಹಲಿಯತ್ತ ಮೆರವಣಿಗೆ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ.
ಕೇಂದ್ರ ಸರ್ಕಾರದ ಸಚಿವರು ಮತ್ತು ರೈತ ಮುಖಂಡರು ಭಾನುವಾರ ಸಭೆ ನಡೆಸಿ ಎಂಎಸ್ಪಿ ಬಗ್ಗೆ ಚರ್ಚಿಸಿದ್ದರು. ಸರ್ಕಾರ ಬೆಳೆಗಳಿಗೆ ನೀಡುವ ದರ ಮತ್ತು ಯಾವ ಬೆಳೆ ಖರೀದಿ ಮಾಡಲಾಗುತ್ತದೆ ಎಂಬ ಬಗ್ಗೆ ರೈತರಿಗೆ ತಿಳಿಸಲಾಗಿತ್ತು. ಇದು ರೈತ ನಾಯಕರಲ್ಲಿ ಚರ್ಚೆಯ ನಂತರ ಸರ್ಕಾರದ ಪ್ರಸ್ತಾವನೆಯನ್ನು ಒಪ್ಪಲಾಗಲ್ಲ. ನಮ್ಮ ಬೇಡಿಕೆಗೆ ಅನುಗುಣವಾಗಿ ಪ್ರಸ್ತಾವ ಬಂದಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್, ಚರ್ಚೆಯ ನಂತರ ರೈತ ಸಂಘಟನೆಗಳು ಸರ್ಕಾರದ ಎಂಎಸ್ಪಿ ಪ್ರಸ್ತಾವನೆಯನ್ನು ತಿರಸ್ಕರಿಸಿವೆ. ಸರ್ಕಾರದ ಭರವಸೆಯು ರೈತರಿಗೆ ಅನುಕೂಲಕರವಾಗಿಲ್ಲ. ಹೀಗಾಗಿ ನಾವಿದನ್ನು ಒಪ್ಪಲ್ಲ. ನಮ್ಮ ಹೋರಾಟ ಮುಂದುವರಿಯಲಿದೆ. ಫೆಬ್ರವರಿ 21 ರಂದು ದೆಹಲಿಯತ್ತ ಸಾಗಲಾಗುವುದು ಎಂದು ತಿಳಿಸಿದರು.
ಎಣ್ಣೆಕಾಳಿಗೆ ಎಂಎಸ್ಪಿ ನೀಡಿ:ಕೇಂದ್ರ ಸರ್ಕಾರ 1.75 ಕೋಟಿ ರೂಪಾಯಿ ಮೊತ್ತದ ತಾಳೆ ಎಣ್ಣೆಯನ್ನು ಹೊರಗಿನಿಂದ ಆಮದು ಮಾಡಿಕೊಳ್ಳುತ್ತಿದೆ. ಇದು ಉತ್ತಮ ಗುಣಮಟ್ಟದ್ದಾಗಿಲ್ಲ. ಆಮದಿಗೆ ನೀಡುವ ಹಣವನ್ನು ಎಣ್ಣೆ ಬೀಜ ಬೆಳೆಯುವ ರೈತರಿಗೆ ನೀಡಬೇಕು. ಇದನ್ನು ಸರ್ಕಾರ ಒಪ್ಪುತ್ತಿಲ್ಲ. ಹೀಗಾಗಿ ಸರ್ಕಾರದ ಎಂಎಸ್‌ಪಿಗೆ ಒಪ್ಪಿಗೆ ಇಲ್ಲ. ಎಂಎಸ್‌ಪಿಗೆ ಕಾನೂನು ಮಾನ್ಯತೆ ನೀಡದಿದ್ದರೆ, ರೈತರ ಸುಲಿಗೆ ಮುಂದುವರಿಯಲಿದೆ. ಇದನ್ನು ಆಗಲು ಬಿಡುವುದಿಲ್ಲ ಎಂದರು.