ಹೈದರಾಬಾದ್:ಓಲಾ ಎಲೆಕ್ಟ್ರಿಕ್ ಸ್ಕೂಟಿಗಳ ಬಗ್ಗೆ ಸಾವಿರಾರು ದೂರುಗಳು ದಾಖಲಾಗುತ್ತಿವೆ. ಎಲೆಕ್ಟ್ರಿಕ್ ವೆಹಿಕಲ್ಗಳನ್ನು ದೇಶದಲ್ಲಿ ಹೆಚ್ಚಿಸಬೇಕು ಎಂಬ ಕೂಗಿನ ಮಧ್ಯೆ ಓಲಾ ಕಂಪನಿಯ ಬೈಕ್ಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಇದರ ವಿರುದ್ಧ ಹಾಸ್ಯನಟ ಕುನಾಲ್ ಕಮ್ರಾ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದ್ದಾರೆ.
ಓಲಾ ಎಲೆಕ್ಟ್ರಿಕ್‌ನ ಎಸ್1 ಸರಣಿಯ ಇವಿ ಸ್ಕೂಟರ್‌ಗಳ ಗುಣಮಟ್ಟದ ಬಗ್ಗೆ ಗ್ರಾಹಕರು ಭಾರೀ ನಿರಾಸೆ ವ್ಯಕ್ತಪಡಿಸಿದ್ದಾರೆ. ಇದನ್ನು ಹಾಸ್ಯನಟ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಓಲಾದ ಸಂಸ್ಥಾಪಕ ಸಿಇಒ ಭವಿಶ್ ಅಗರ್ವಾಲ್ ಅವರಿಗೆ ಕೋಪ ತರಿಸಿದ್ದು, ಮಾತಿಕ ಚಕಮಕಿಗೆ ಕಾರಣವಾಗಿದೆ. ಓಲಾ ಕಂಪನಿಯು ತಯಾರಿಸಿದ ಎಲೆಕ್ಟ್ರಿಕ್ ವಾಹನಗಳ ಸಮಸ್ಯೆಗಳ ಕುರಿತು ಪತ್ರಿಕಾ ವರದಿಯನ್ನು ಹಾಸ್ಯನಟ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಬಳಿಕ ಈ ಮಾತಿನ ಯುದ್ಧ ಪ್ರಾರಂಭವಾಗಿದೆ.
"ಭಾರತೀಯ ಗ್ರಾಹಕರು ಧ್ವನಿ ಹೊಂದಿದ್ದಾರೆಯೇ? ಅವರು ಇದಕ್ಕೆ ಅರ್ಹರೇ? ದ್ವಿಚಕ್ರ ವಾಹನಗಳು ಅನೇಕ ದೈನಂದಿನ ಕೂಲಿ ಕಾರ್ಮಿಕರ ಜೀವನಾಡಿ" ಎಂದು ಕಂಪನಿಯ ಮಾಲೀಕರು ಓಲಾ ಫ್ಯಾಕ್ಟರಿಯ ಫೋಟೋವನ್ನು ಹಂಚಿಕೊಂಡ ಪೋಸ್ಟ್ ಅನ್ನು ಮರುಟ್ವೀಟ್ ಮಾಡಿರುವ ಹಾಸ್ಯನಟ ಕಮ್ರಾ ಈ ಒಕ್ಕಣೆಯನ್ನು ಬರೆದುಕೊಂಡಿದ್ದಾರೆ.
ಜೊತೆಗೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರನ್ನು ಟ್ಯಾಗ್ ಮಾಡಿ, "ಭಾರತೀಯರು ಎಲೆಕ್ಟ್ರಿಕ್ ಬೈಕ್ಗಳನ್ನು ಬಳಸುವುದು ಹೀಗೆಯೇ? ಎಂದು ಪ್ರಶ್ನಿಸಿ, ಗ್ರಾಹಕ ವ್ಯವಹಾರಗಳ ಇಲಾಖೆಗೂ ಟ್ಯಾಗ್ ಮಾಡಿದ್ದಾರೆ.