ಕರ್ನಾಟಕ

karnataka

ETV Bharat / bharat

ಕೇಂದ್ರ ಬಜೆಟ್​ಗೆ ದಿನಗಣನೆ: ಯಾವೆಲ್ಲಾ ಸಬ್ಸಿಡಿಗಳಿಗೆ ಇಡಬೇಕಾದ ಅನುದಾನವೆಷ್ಟು ಗೊತ್ತಾ? - SUBSIDYS IN UNION BUDGET

ಕೇಂದ್ರ ಬಜೆಟ್​​ನಲ್ಲಿ ವಿವಿಧ ಕ್ಷೇತ್ರಗಳಿಗೆ ಅನುದಾನ ಮೀಸಲಿಟ್ಟಂತೆ ಸಬ್ಸಿಡಿಗಳಿಗೂ ಹಂಚಿಕೆ ಮಾಡಬೇಕಾಗುತ್ತದೆ. ಆ ಲೆಕ್ಕಾಚಾರ ಎಷ್ಟು ಎಂಬುದನ್ನು ಕೃಷ್ಣಾನಂದ ಅವರು ಇಲ್ಲಿ ವಿವರಿಸಿದ್ದಾರೆ.

ಕೇಂದ್ರ ಬಜೆಟ್​
ಕೇಂದ್ರ ಬಜೆಟ್​ (ETV Bharat)

By ETV Bharat Karnataka Team

Published : Jan 28, 2025, 9:46 PM IST

ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂದಿನ ಹಣಕಾಸು ವರ್ಷಕ್ಕೆ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಹಲವು ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಸೇರಿ, ಸಬ್ಸಿಡಿಗಳಿಗೂ ಹಂಚಿಕೆ ಮಾಡಬೇಕಿದೆ. ಸಬ್ಸಿಡಿಗಳು ರೈತರು ಮತ್ತು ಬಡವರಿಗೆ ನೆರವು ನೀಡುತ್ತವೆ. ಇದು ಯಾವುದೇ ಸರ್ಕಾರವೂ ಕೂಡ ಮೊದಲ ಆದ್ಯತೆ ನೀಡಬೇಕಿದೆ. ಪ್ರಮುಖವಾಗಿ ಆಹಾರ, ಇಂಧನ ಮತ್ತು ರಸಗೊಬ್ಬರಕ್ಕೆ ಸಬ್ಸಿಡಿ ಒದಗಿಸಬೇಕು.

ಇಂಧನ ಹೊರೆ ಕಡಿಮೆ ಮಾಡುವ ಉದ್ದೇಶ:ಆಹಾರ ಸಬ್ಸಿಡಿಗಳು ಬಹುಪಾಲು ನಾಗರಿಕರಿಗೆ ಆಹಾರ ಧಾನ್ಯಗಳು ಕೈಗೆಟುಕುವ ದರದಲ್ಲಿ ದೊಕಿಸಿಕೊಡುವ ಗುರಿಯನ್ನು ಹೊಂದಿವೆ. ಮತ್ತೊಂದೆಡೆ, ಇಂಧನ ಸಬ್ಸಿಡಿಗಳು ಉದ್ದೇಶಿತ ಫಲಾನುಭವಿಗಳಿಗೆ ಸೀಮೆಎಣ್ಣೆ ಮತ್ತು ಗೃಹಬಳಕೆಯ ಅಡುಗೆ ಅನಿಲದ ಬೆಲೆಗಳನ್ನು ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆ ಇರಿಸುವುದಾಗಿದೆ. ಈ ಮೂಲಕ ಬಡವರ ಮೇಲಿನ ಇಂಧನ ಬಳಕೆಯ ಹೊರೆಯನ್ನು ಕಡಿಮೆ ಮಾಡಲು ಉದ್ದೇಶವಾಗಿದೆ. ರಸಗೊಬ್ಬರ ಸಬ್ಸಿಡಿಗಳು ರೈತರಿಗೆ ಕಡ್ಡಾಯವಾಗಿದೆ. ಕೈಗೆಟುಕುವ ದರದಲ್ಲಿ ಯೂರಿಯಾ ಮತ್ತು ಇತರ ಪೋಷಕಾಂಶ ರಸಗೊಬ್ಬರಗಳನ್ನು ಪೂರೈಸುವುದಾಗಿದೆ.

2024-25 ನೇ ಸಾಲಿನ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು 48 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ದಾಖಲೆಯ ಬಜೆಟ್ ಅನ್ನು ಮಂಡಿಸಿದೆ. ಇದರಲ್ಲಿ ಆದಾಯ ವೆಚ್ಚಕ್ಕೆ 37 ಲಕ್ಷ ಕೋಟಿ ರೂಪಾಯಿ, ಬಂಡವಾಳ ವೆಚ್ಚಕ್ಕಾಗಿ 11 ಲಕ್ಷ ಕೋಟಿ ರೂಪಾಯಿಗೂ ಅಧಿಕ ಅನುದಾನವನ್ನು ಹಂಚಿಕೆ ಮಾಡಲಾಗಿದೆ.

ಆದಾಯ ವೆಚ್ಚ ಎಂದರೆ, ನೌಕರರ ಸಂಬಳ, ವೇತನ, ಪಿಂಚಣಿ, ಬಡ್ಡಿ ಪಾವತಿ, ಸಾಲ, ಸಬ್ಸಿಡಿ ಪಾವತಿಗಳು ಮತ್ತು ಇತರ ವೆಚ್ಚಗಳಾಗಿವೆ. ಬಂಡವಾಳ ವೆಚ್ಚವೆಂದರೆ, ಕಟ್ಟಡಗಳು, ರಸ್ತೆಗಳು, ರೈಲ್ವೆಗಳು, ವಿಮಾನ ನಿಲ್ದಾಣಗಳು, ಬಂದರುಗಳು, ಶಾಲೆಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳಂತಹ ಮೂಲಸೌಕರ್ಯಗಳ ನಿರ್ಮಾಣಕ್ಕೆ ಮೀಸಲಿಟ್ಟ ಅನುದಾನವಾಗಿದೆ.

ಆದಾಯ ವೆಚ್ಚಕ್ಕೆ ಮೀಸಲಿಟ್ಟ 37 ಲಕ್ಷ ಕೋಟಿ ರೂ.ಗಳಲ್ಲಿ, ಸರ್ಕಾರವು 4.28 ಲಕ್ಷ ಕೋಟಿ ರೂಪಾಯಿ ಅಥವಾ ಒಟ್ಟು ಬಜೆಟ್ ವೆಚ್ಚದ ಸುಮಾರು ಶೇಕಡಾ 9 ರಷ್ಟು ಸಬ್ಸಿಡಿಗಳಿಗಾಗಿ ಖರ್ಚು ಮಾಡಿದೆ. ಅಂದರೆ, 2024-25ರ ಹಣಕಾಸು ವರ್ಷದಲ್ಲಿ ಸರ್ಕಾರವು ಖರ್ಚು ಮಾಡಿದ ಪ್ರತಿ 10 ರೂಪಾಯಿಗಳಲ್ಲಿ ದೇಶದ ರೈತರು ಸೇರಿದಂತೆ ಸಮಾಜದ ಬಡ ಮತ್ತು ನಿರ್ಗತಿಕ ವರ್ಗಗಳಿಗೆ ಆರ್ಥಿಕ ಸಹಾಯವಾಗಿ ಒಂದು ರೂಪಾಯಿ ಹಂಚಲಾಗಿದೆ.

ಆಹಾರ ಸಬ್ಸಿಡಿ:ಬಡವರು ಮತ್ತು ನಿರ್ಗತಿಕರಿಗೆ ಆಹಾರ ಧಾನ್ಯಗಳನ್ನು ಸಬ್ಸಿಡಿಯಲ್ಲಿ ಒದಗಿಸುವ ವೆಚ್ಚವನ್ನು ಒಳಗೊಂಡಿರುವ ಆಹಾರ ಭದ್ರತಾ ಮಸೂದೆಯು ಕೇಂದ್ರ ಸರ್ಕಾರದ ಸಬ್ಸಿಡಿ ಮಸೂದೆಯ ಅತಿದೊಡ್ಡ ಭಾಗವಾಗಿದೆ. ಉದಾಹರಣೆಗೆ, 2022-23ನೇ ಹಣಕಾಸು ವರ್ಷದ ನಿಜವಾದ ಆಹಾರ ಸಬ್ಸಿಡಿ ಮಸೂದೆಯು 2.73 ಲಕ್ಷ ಕೋಟಿ ರೂ.ಗಳಷ್ಟಿತ್ತು. ಮುಂದಿನ ವರ್ಷ, ಸರ್ಕಾರವು ಆಹಾರ ಸಬ್ಸಿಡಿ ಮಸೂದೆಯನ್ನು 75,000 ಕೋಟಿ ರೂಪಾಯಿಯಷ್ಟು ಕಡಿತ ಮಾಡುವ ಗುರಿ ಹೊಂದಿತ್ತು. ಅಂದರೆ, ಇದು ಸುಮಾರು ಒಟ್ಟಾರೆ ಅನುದಾನದ ಶೇಕಡಾ 28 ರಷ್ಟು ಇಳಿಕೆಯಾಗಿತ್ತು.

ಆಹಾರ ಸಬ್ಸಿಡಿಗಳನ್ನು 2 ಲಕ್ಷ ಕೋಟಿ ರೂ.ಗಳಿಗಿಂತ ಕಡಿಮೆ ಮಾಡುವ ಉದ್ದೇಶದ ಹೊರತಾಗಿಯೂ, 2023-24ನೇ ಸಾಲಿನಲ್ಲಿ 2.12 ಲಕ್ಷ ಕೋಟಿ ರೂಪಾಯಿಯಷ್ಟು ಖರ್ಚಾಗಿತ್ತು. ಅಂದರೆ, ಇಳಿಕೆ ಗುರಿಗಿಂತ 15 ಸಾವಿರ ಕೋಟಿ ಹೆಚ್ಚಾಗಿತ್ತು. 2024-25 ರ ಆಹಾರ ಸಬ್ಸಿಡಿ ದರ ಎಷ್ಟಿದೆ ಎಂಬುದು ಮುಂದಿನ ಆರ್ಥಿಕ ವರ್ಷದ ಬಜೆಟ್​ನಲ್ಲಿ ತಿಳಿದು ಬರಲಿದೆ.

ರಸಗೊಬ್ಬರ ಸಬ್ಸಿಡಿ:ಎರಡನೇ ಅತಿದೊಡ್ಡ ಸಬ್ಸಿಡಿ ಖರ್ಚಾಗುವುದು ರಸಗೊಬ್ಬರಕ್ಕೆ. ಈ ಸಬ್ಸಿಡಿಯನ್ನು ನೇರವಾಗಿ ರೈತರಿಗೆ ಪಾವತಿಸದೆ, ರಸಗೊಬ್ಬರ ಉತ್ಪಾದಕರಿಗೆ ನೀಡಲಾಗುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ, ಸರ್ಕಾರವು ಮೀಸಲಿಟ್ಟ 1.65 ಲಕ್ಷ ಕೋಟಿ ರೂಪಾಯಿಗಳಲ್ಲಿ ಯೂರಿಯಾಗೆ 1.19 ಲಕ್ಷ ಕೋಟಿ, ಇತರ ಪೌಷ್ಟಿಕಾಂಶ ಆಧಾರಿತ ಗೊಬ್ಬರಗಳಿಗೆ 45 ಸಾವಿರ ಕೋಟಿ ರೂಪಾಯಿ ನೀಡಿದೆ. ಈ ಸಬ್ಸಿಡಿಗಳಿಗೆ ಬಜೆಟ್​ನಲ್ಲಿ ಹಂಚಿಕೆ ಮಾಡಿದ್ದಕ್ಕೂ ಮತ್ತು ವಾಸ್ತವಿಕ ವೆಚ್ಚಕ್ಕೂ ಹೆಚ್ಚಳ ಸಾಮಾನ್ಯ.

2023-24ನೇ ಹಣಕಾಸು ವರ್ಷದಲ್ಲಿ, ಹಣಕಾಸು ಸಚಿವೆ ಸೀತಾರಾಮನ್ ಅವರು ಯೂರಿಯಾ ಸಬ್ಸಿಡಿಗೆ 1.31 ಲಕ್ಷ ಕೋಟಿ ರೂ.ಗಳು ಮತ್ತು ಪೌಷ್ಟಿಕಾಂಶ ಆಧಾರಿತ ಸಬ್ಸಿಡಿಗಳಿಗೆ 44,000 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದಾರೆ. ಆದಾಗ್ಯೂ, ಹಿಂದಿನ ಹಣಕಾಸು ವರ್ಷದ ಪರಿಷ್ಕೃತ ಅಂಕಿ - ಅಂಶಗಳು ಯೂರಿಯಾ ಸಬ್ಸಿಡಿ ವೆಚ್ಚದಲ್ಲಿ ಅಲ್ಪ ಇಳಿಕೆಯನ್ನು ತೋರಿಸಿವೆ. ಆದರೆ, ಪೋಷಕಾಂಶ ಆಧಾರಿತ ಸಬ್ಸಿಡಿ ದರವು 44,000 ಕೋಟಿಯಿಂದ 60,000 ಕೋಟಿ ರೂ.ಗಳಿಗೆ ಏರಿದೆ. ಅಂದರೆ, ಇದು ಶೇಕಡಾ 37 ರಷ್ಟು ಹೆಚ್ಚಳ.

ಇಂಧನ ಸಬ್ಸಿಡಿ:ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ನಿಯಂತ್ರಣ ತೆಗೆದುಹಾಕುವ ಮೂಲಕ ಕೇಂದ್ರ ಸರ್ಕಾರವು ಇಂಧನ ಸಬ್ಸಿಡಿ ದರವನ್ನು ಗಣನೀಯವಾಗಿ ಕಡಿಮೆ ಮಾಡಿದೆ. 2024-25 ನೇ ಸಾಲಿನ ಹಣಕಾಸು ವರ್ಷದಲ್ಲಿ ಸರ್ಕಾರವು ಇಂಧನ ಸಬ್ಸಿಡಿಗಳಿಗೆ ಕೇವಲ 12 ಸಾವಿರ ಕೋಟಿ ರೂ.ಗಳನ್ನು ಮಾತ್ರ ಖರ್ಚು ಮಾಡುವ ನಿರೀಕ್ಷೆಯಿದೆ. ಇದೇ ವೇಳೆ ಎಲ್‌ಪಿಜಿ ಸಬ್ಸಿಡಿಗೆ 11,925 ಕೋಟಿ ರೂ.ಗಳನ್ನು ನಿಗದಿಪಡಿಸಿದೆ.

ಇತರ ಸಬ್ಸಿಡಿಗಳು:ಈ ಮೂರು ಪ್ರಮುಖ ಸಬ್ಸಿಡಿಗಳ ಜೊತೆಗೆ, ಕೇಂದ್ರ ಸರ್ಕಾರವು ಇತರ ಸಬ್ಸಿಡಿಗಳಿಗೆ ಸುಮಾರು 50 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡುತ್ತದೆ. ಇದರಿಂದಾಗಿ ಪ್ರಸ್ತುತ ಹಣಕಾಸು ವರ್ಷದ ಒಟ್ಟು ಸಬ್ಸಿಡಿ ಬಿಲ್ 4.28 ಲಕ್ಷ ಕೋಟಿ ರೂ.ಗಳಿಗೆ ತಲುಪುತ್ತದೆ.

ಉದಾಹರಣೆಗೆ, ಕೇಂದ್ರವು ಸಮಾಜದ ವಿವಿಧ ವರ್ಗಗಳಿಗೆ ಬಡ್ಡಿ ಸಬ್ಸಿಡಿಗಳಿಗಾಗಿ ಸುಮಾರು 30 ಸಾವಿರ ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಇದರಲ್ಲಿ ವಿವಿಧ ವಿದ್ಯಾರ್ಥಿವೇತನ ಯೋಜನೆಗಳು, ವಸತಿ ಯೋಜನೆಗಳು, ರಾಷ್ಟ್ರೀಯ ವಿದ್ಯುತ್ ನಿಧಿಯ ಮೇಲಿನ ಬಡ್ಡಿ ಸಬ್ಸಿಡಿ ಇತ್ಯಾದಿಗಳು ಇದರಲ್ಲಿ ಸೇರಿವೆ.

ಹಣದುಬ್ಬರ ನಿಯಂತ್ರಿಸಲು ಸರ್ಕಾರವು ಯಾವುದೇ ವಸ್ತುವನ್ನು ಮಾರುಕಟ್ಟೆ ಬೆಲೆಗಳಲ್ಲಿ ಖರೀದಿಸಿ, ಅದನ್ನು ನಾಗರಿಕರಿಗೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡುತ್ತದೆ. ಇದಕ್ಕಾಗಿ 18 ಸಾವಿರ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ.

ಇದನ್ನೂ ಓದಿ:ಕೇಂದ್ರದ ಬಜೆಟ್​ನಲ್ಲಿ ರಾಜ್ಯದ ಕೃಷಿ - ಕೈಗಾರಿಕೆ ವಲಯಗಳ ನಿರೀಕ್ಷೆಗಳೇನು?

ಕೇಂದ್ರ ಬಜೆಟ್​ಗೆ ದಿನಗಣನೆ ಆರಂಭ: ಆಟೋಮೊಬೈಲ್​ ವಲಯಕ್ಕೆ ಸಿಗಬಹುದೇ ‘ಸೀತಾರಾಮ’ನ್​ ಕೃಪೆ?

ಬೆಂಗಳೂರಿನ ಯೋಜನೆಗಳಿಗೆ ಬಜೆಟ್​​ನಲ್ಲಿ​ ಅನುದಾನ ನೀಡುವಂತೆ ನಿರ್ಮಲಾ ಸೀತಾರಾಮನ್​ಗೆ ಡಿಸಿಎಂ ಡಿಕೆಶಿ ಪತ್ರ

ABOUT THE AUTHOR

...view details