ನವದೆಹಲಿ: ವೇತನ ಮಿತಿ ಹೆಚ್ಚಾದ ಕಾರಣದಿಂದ ಇಎಸ್ಐ ಯೋಜನೆಯ ವ್ಯಾಪ್ತಿಯಿಂದ ತೆಗೆದುಹಾಕಲಾದ ನಿವೃತ್ತ ಉದ್ಯೋಗಿಗಳಿಗೆ ಕೂಡ ಇಎಸ್ಐಸಿ ವೈದ್ಯಕೀಯ ಸೌಲಭ್ಯಗಳನ್ನು ನೀಡುವ ಪ್ರಸ್ತಾಪವನ್ನು ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ಅನುಮೋದಿಸಿದೆ. ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಇಎಸ್ಐಸಿಯ 193ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಏಪ್ರಿಲ್ 1, 2012ರ ನಂತರ ಕನಿಷ್ಠ ಐದು ವರ್ಷಗಳ ಕಾಲ ವಿಮೆ ಪಡೆಯಬಹುದಾದ ಉದ್ಯೋಗದಲ್ಲಿದ್ದ ಮತ್ತು ಏಪ್ರಿಲ್ 1, 2015 ರಂದು ಅಥವಾ ನಂತರ ತಿಂಗಳಿಗೆ 30,000 ರೂ.ವರೆಗಿನ ವೇತನದೊಂದಿಗೆ ನಿವೃತ್ತರಾದ ಅಥವಾ ಸ್ವಯಂಪ್ರೇರಿತವಾಗಿ ನಿವೃತ್ತರಾದ ವ್ಯಕ್ತಿಗಳು ಈಗ ಹೊಸ ಯೋಜನೆಯಡಿ ವೈದ್ಯಕೀಯ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ನೌಕರರ ರಾಜ್ಯ ವಿಮಾ (ಇಎಸ್ಐ) ಯೋಜನೆಯು ವಿಮಾದಾರರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ವೈದ್ಯಕೀಯ ಸಲಹೆ, ಚಿಕಿತ್ಸೆ, ಔಷಧಿಗಳು ಮತ್ತು ಚುಚ್ಚುಮದ್ದು, ತಜ್ಞ ಸಮಾಲೋಚನೆ ಮತ್ತು ಆಸ್ಪತ್ರೆಗೆ ದಾಖಲಾಗುವ ಶುಲ್ಕಗಳನ್ನು ಭರಿಸುವ ರೂಪದಲ್ಲಿ ಸಂಪೂರ್ಣ ವೈದ್ಯಕೀಯ ಆರೈಕೆಯನ್ನು ಒದಗಿಸುತ್ತದೆ.
ಇಎಸ್ಐ ಯೋಜನೆಯು 10 ಅಥವಾ ಅದಕ್ಕಿಂತ ಹೆಚ್ಚು ಜನ ಕೆಲಸ ಮಾಡುವ ಕಾರ್ಖಾನೆಗಳು ಮತ್ತು ರಸ್ತೆ ಸಾರಿಗೆ, ಹೋಟೆಲ್ಗಳು, ರೆಸ್ಟೋರೆಂಟ್ಗಳು, ಸಿನೆಮಾ ಮಂದಿರಗಳು, ಮಾಧ್ಯಮ ಸಂಸ್ಥೆ, ಅಂಗಡಿಗಳು ಮತ್ತು ಶೈಕ್ಷಣಿಕ ಅಥವಾ ವೈದ್ಯಕೀಯ ಸಂಸ್ಥೆಗಳಂತಹ ಇತರ ಸಂಸ್ಥೆಗಳಿಗೆ ಅನ್ವಯಿಸುತ್ತದೆ