ನಾಗ್ಪುರ(ಮಹಾರಾಷ್ಟ್ರ): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಮತ್ತು ನಾಗ್ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿತಿನ್ ಗಡ್ಕರಿ ಅವರ ಪ್ರಚಾರ ಸಭೆಯಲ್ಲಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿರುವುದು ಕಂಡುಬಂದಿದೆ. ಈ ಘಟನೆಯ ವಿಚಾರಣೆ ನಡೆಸಿರುವ ಚುನಾವಣಾ ಆಯೋಗವು ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ಚುನಾವಣಾ ಪ್ರಚಾರಕ್ಕೆ ಶಾಲಾ ಮಕ್ಕಳನ್ನು ಬಳಸಿಕೊಳ್ಳುವ ಮೂಲಕ ನಿತಿನ್ ಗಡ್ಕರಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ವಕ್ತಾರ ಅತುಲ್ ಲೋಂಧೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಆಯೋಗ ಶಾಲೆಯ ವಿರುದ್ಧ ಕ್ರಮಕ್ಕೆ ಆದೇಶಿಸಿದೆ. ಆದರೆ, ಚುನಾವಣಾ ಆಯೋಗದ ಈ ಕ್ರಮ ತಪ್ಪು ಎಂದಿರುವ ದೂರುದಾರ ಅತುಲ್, ಅಭ್ಯರ್ಥಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ನಿತಿನ್ ಗಡ್ಕರಿ ಏಪ್ರಿಲ್ 1ರಂದು ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಕುರಿತು ಏಪ್ರಿಲ್ 3ರಂದು ಅತುಲ್ ಲೋಂಧೆ ದೂರು ಕೊಟ್ಟಿದ್ದರು. ಮಕ್ಕಳು ಭಾಗಿಯಾದ ಫೋಟೋ ಮತ್ತು ವಿಡಿಯೋ ಸಾಕ್ಷ್ಯಗಳನ್ನೂ ಆಯೋಗಕ್ಕೆ ಒದಗಿಸಲಾಗಿತ್ತು. ಈ ಬಗ್ಗೆ ಚುನಾವಣಾ ಆಯೋಗ ಪರಿಶೀಲನೆ ನಡೆಸಿದೆ. ಅಲ್ಲದೇ, ಶಾಲೆಯ ಮುಖ್ಯೋಪಾಧ್ಯಾಯರನ್ನು ವಿಚಾರಣೆಗೊಳಪಡಿಸಲಾಗಿದೆ. ಇದೀಗ ಆರೋಪ ಸಾಬೀತಾಗಿದ್ದರಿಂದ ಶಾಲೆಯ ನಿರ್ದೇಶಕ ಮತ್ತು ಮುಖ್ಯೋಪಾಧ್ಯಾಯರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಶಿಕ್ಷಣಾಧಿಕಾರಿಗೆ ಆಯೋಗ ತಿಳಿಸಿದೆ.
ಈ ಬಗ್ಗೆ ಅತುಲ್ ಲೋಂಧೆ ಮಾತನಾಡಿ, ಚುನಾವಣೆಗೆ ಮಕ್ಕಳನ್ನು ಬಳಸಿಕೊಳ್ಳುವಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟವಾಗಿ ಹೇಳಿದೆ. ಆದಾಗ್ಯೂ, ದೇವೇಂದ್ರ ಫಡ್ನವೀಸ್ ಸೇರಿದಂತೆ ವಿವಿಧ ನಾಯಕರ ಸಭೆಗಳಲ್ಲಿ ಮಕ್ಕಳ ಬಳಕೆಯಾಗುತ್ತಿದೆ. ಈಗ ಅಭ್ಯರ್ಥಿ ಬದಲಿಗೆ ಶಾಲೆಯ ವಿರುದ್ಧ ಆಯೋಗ ಕ್ರಮಕ್ಕೆ ಮುಂದಾಗಿದೆ. ಹೀಗಾಗಿ ದೇಶದಲ್ಲಿ ಕಾನೂನಿದೆಯೋ ಇಲ್ಲವೋ?, ಚುನಾವಣಾ ಆಯೋಗ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.