ಮಧ್ಯಪ್ರದೇಶ: ರಾಜ್ಯದ ಛಿಂದ್ವಾಡ ಎಂಬಲ್ಲಿ ಕಳೆದ ರಾತ್ರಿ ಭೀಕರ ಹತ್ಯಾಕಾಂಡ ನಡೆದಿದೆ. ತನ್ನ ಕುಟುಂಬದ 8 ಸದಸ್ಯರನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಮನೆಮಗ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಂತಕನಿಗೆ 8 ದಿನಗಳ ಹಿಂದಷ್ಟೇ ಮದುವೆಯಾಗಿತ್ತು ಎಂದು ತಿಳಿದುಬಂದಿದೆ.
ಆರೋಪಿ ಸುಖನಿದ್ರೆಯಲ್ಲಿದ್ದ ತನ್ನ ಹೆಂಡತಿ, ತಾಯಿ (55), ಅಣ್ಣ(35), ತಂಗಿ (16), ಅತ್ತಿಗೆ (30) ಮಾತ್ರವಲ್ಲದೇ ಮಕ್ಕಳನ್ನೂ ಕೊಲೆಗೈದಿದ್ದಾನೆ. ಆ ಬಳಿಕ ಚಿಕ್ಕಪ್ಪನ ಮನೆಗೆ ತೆರಳಿ ಚಿಕ್ಕಪ್ಪನ 10 ವರ್ಷದ ಮಗನ ಮೇಲೂ ಹಲ್ಲೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ತಪ್ಪಿಸಿಕೊಂಡ ಚಿಕ್ಕಪ್ಪನ ಮಗ ಊರಿನವರಿಗೆ ಘಟನೆಯ ಕುರಿತು ಮಾಹಿತಿ ನೀಡಿದ್ದಾನೆ. ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ.