ಕರ್ನಾಟಕ

karnataka

ETV Bharat / bharat

ರಾಜಸ್ಥಾನ: ರಾಷ್ಟ್ರೀಯ ಹೆದ್ದಾರಿಯಲ್ಲಿ ಟೆಂಪೋಗೆ ಗುದ್ದಿದ ಬಸ್; 8 ಮಕ್ಕಳು ಸೇರಿ 11 ಮಂದಿ ಸಾವು

ರಾಜಸ್ಥಾನದ ದೋಲ್ಪುರದ ಸುನಿಪುರ್ ಗ್ರಾಮದಲ್ಲಿ ಶನಿವಾರ ರಾತ್ರಿ 11ರ ಸುಮಾರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

By ETV Bharat Karnataka Team

Published : 9 hours ago

ರಾಜಸ್ಥಾನದ ದೋಲ್ಪುರದಲ್ಲಿ ಟೆಂಪೋ-ಬಸ್​​ ಅಪಘಾತ ನಡೆದು 11 ಮಂದಿ ಸಾವನ್ನಪ್ಪಿದ್ದಾರೆ.
ರಾಜಸ್ಥಾನದ ದೋಲ್ಪುರದಲ್ಲಿ ಭೀಕರ ರಸ್ತೆ ಅಪಘಾತ (ETV Bharat)

ದೋಲ್ಪುರ(ರಾಜಸ್ಥಾನ): ವೇಗದೂತ ಸ್ಲೀಪರ್ ಬಸ್ ಟೆಂಪೋಗೆ ಡಿಕ್ಕಿ ಹೊಡೆದು 11 ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಸುನಿಪುರ್ ಗ್ರಾಮದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 11ಬಿಯಲ್ಲಿ ಶನಿವಾರ ರಾತ್ರಿ 11ರ ಸುಮಾರಿಗೆ ನಡೆದಿದೆ. ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಪೈಕಿ 8 ಮಂದಿ ಮಕ್ಕಳಿದ್ದಾರೆ. ಬಸ್‌ ಚಾಲಕ ಮತ್ತು ನಿರ್ವಾಹಕ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದು ದೋಲ್ಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಬರಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಇರ್ಫಾನ್ ಅಲಿಯಾಸ್ ಬಂಟಿ ಎಂಬವರ ಮಗಳು ಅಸ್ಮಾ (14), ಗಫೊ ಎಂಬವರ ಮಗ ಇರ್ಫಾನ್ (38), ಇರ್ಫಾನ್ ಮಕ್ಕಳಾದ ಸಲ್ಮಾನ್ (8), ಸಾಖಿರ್ (6), ಜಾಹಿರ್ ಎಂಬವರ ಪುತ್ರ ಡನಿಶ್ (10) ಆಸೀಫ್ ಮಗ ಅಜಾನ್ (5), ನನು ಎಂಬವರ ಪತ್ನಿ ಜರೀನಾ (35), ಇವರ ಮಕ್ಕಳಾದ ಮಗಳು ಸುಖಿ (7), ಮಗ ಸನಿಫ್ (9) ಮತ್ತು ಆಶಿಯಾನಾ (10) ಮೃತಪಟ್ಟವರೆಂದು ಗುರುತಿಸಲಾಗಿದೆ.

ಇರ್ಫಾನ್ ಪತ್ನಿ ಜೂಲಿ (32), ಧರ್ಮೇಂದ್ರ (38) ಹಾಗು ಪ್ರವೀಣ್ (32) ಗಂಭೀರವಾಗಿ ಗಾಯಗೊಂಡವರಾಗಿದ್ದಾರೆ.

ರಾಜಸ್ಥಾನದ ದೋಲ್ಪುರದಲ್ಲಿ ಟೆಂಪೋ- ಬಸ್​​​ ಅಪಘಾತ (ETV Bharat)

ಬರಿ ನಗರದ ಗುಮಟ್ ಮೊಹಲ್ಲಾದ ಕರೀಂ ಕಾಲನಿಯ ಈ ಕುಟುಂಬ ಬರೌಲಿ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಆಯೋಜಿಸಲಾಗಿದ್ದ 'ಭಾತ್' ಕಾರ್ಯಕ್ರಮ ಮುಗಿಸಿ ವಾಪಸ್ ಆಗುತ್ತಿದ್ದರು ಎಂದು ಬರಿ ಕೋತ್ವಾಲಿ ಸ್ಟೇಷವ್ ಹೌಸ್ ಆಫೀಸರ್ (SHO) ಶಿವ್ ಲಹರಿ ಮೀನಾ ತಿಳಿಸಿದರು.

"ಸುಮಾರು 11 ಗಂಟೆಯ ವೇಳೆಗೆ ಸುನಿಪುರ್ ಗ್ರಾಮದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ಸ್ಲೀಪರ್ ಕೋಚ್ ಬಸ್ ಇವರಿದ್ದ ಟೆಂಪೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ, 11 ಮಂದಿ ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದಾರೆ. ಮೃತದೇಹಗಳ ಶವಪರೀಕ್ಷೆ ಭಾನುವಾರ ನಡೆಯಲಿದೆ. ಟೆಂಪೋ ಮತ್ತು ಬಸ್ಸನ್ನು ನಾವು ವಶಕ್ಕೆ ಪಡೆದಿದ್ದೇವೆ" ಎಂದು ಅವರು ಮಾಹಿತಿ ನೀಡಿದರು. ರಸ್ತೆ ಅಪಘಾತಕ್ಕೆ ಕಾರಣ ತಿಳಿಯಲು ತನಿಖೆ ಕೈಗೊಂಡಿರುವುದಾಗಿ ಅವರು ಇದೇ ವೇಳೆ ಹೇಳಿದರು.

ರಸ್ತೆ ಅಪಘಾತ ಸ್ಥಳದಲ್ಲಿ ಭಾರಿ ಗೊಂದಲ, ಗಲಾಟೆ ವ್ಯಕ್ತವಾಯಿತು. ಘಟನಾ ಸ್ಥಳದಲ್ಲಿ ಹಾದು ಹೋಗುತ್ತಿದ್ದ ಇತರೆ ವಾಹನ ಚಾಲಕರು ತಮ್ಮ ವಾಹನಗಳನ್ನು ನಿಲ್ಲಿಸಿ ನಮಗೆ ಮಾಹಿತಿ ನೀಡಿದರು. ವಿಚಾರ ತಿಳಿಯುತ್ತಿದ್ದಂತೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಇದನ್ನೂ ಓದಿ:ನಕ್ಸಲರು ನೆಲದಡಿ ಹೂತಿಟ್ಟ ಐಇಡಿ ಸ್ಫೋಟ: ಛತ್ತೀಸ್​ಗಢದಲ್ಲಿ ಇಬ್ಬರು ಯೋಧರು ಹುತಾತ್ಮ

ABOUT THE AUTHOR

...view details