ನವದೆಹಲಿ: ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಬಿಬಿಸಿ ವರ್ಲ್ಡ್ ಸರ್ವಿಸ್ ಇಂಡಿಯಾಗೆ ಜಾರಿ ನಿರ್ದೇಶನಾಲಯವು 3.44 ಕೋಟಿ ರೂ.ಗೂ ಹೆಚ್ಚು ದಂಡವನ್ನು ವಿಧಿಸಿದೆ ಎಂದು ಏಜೆನ್ಸಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಬ್ರಿಟಿಷ್ ಬ್ರಾಡ್‌ಕಾಸ್ಟರ್‌ನ ಮೂವರು ನಿರ್ದೇಶಕರಿಗೆ, ಜಾರಿ ನಿರ್ದೇಶನಾಲಯವು ತಲಾ 1.14 ಕೋಟಿ ರೂ.ಗಿಂತ ಹೆಚ್ಚು ದಂಡ ವಿಧಿಸಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ಅಡಿ ಬಿಬಿಸಿ ಇಂಡಿಯಾ ವಿರುದ್ಧ ಆದೇಶ ನೀಡಿದೆ.
ಆಗಸ್ಟ್ 4, 2023 ರಂದು BBC WS ಇಂಡಿಯಾ, ಅದರ ಮೂವರು ನಿರ್ದೇಶಕರು ಮತ್ತು ಈ ಕಾನೂನಿನ ಅಡಿ ವಿವಿಧ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಹಣಕಾಸು ಮುಖ್ಯಸ್ಥರಿಗೆ ಶೋಕಾಸ್ ನೋಟಿಸ್ ನೀಡಿತ್ತು. ಆ ಬಳಿಕ ಪ್ರಕ್ರಿಯೆಗಳನ್ನು ಆರಂಭಿಸಿ ಈ ತೀರ್ಮಾನ ಕೈಗೊಂಡಿದೆ.
100 ಪ್ರತಿಶತ ಎಫ್‌ಡಿಐ ಕಂಪನಿಯಾಗಿರುವ ಬಿಬಿಸಿ ಡಬ್ಲ್ಯುಎಸ್ ಇಂಡಿಯಾ ಡಿಜಿಟಲ್ ಮಾಧ್ಯಮದ ಮೂಲಕ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಅಪ್‌ಲೋಡ್/ಸ್ಟ್ರೀಮಿಂಗ್ ಮಾಡುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.