ಕೋಲ್ಕತ್ತಾ (ಪಶ್ಚಿಮ ಬಂಗಾಳ):ಐಪಿಎಸ್ ಅಧಿಕಾರಿ ವಿವೇಕ್ ಸಹಾಯ್ ಅವರನ್ನು ಪಶ್ಚಿಮ ಬಂಗಾಳದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ನೇಮಿಸಿದ ಒಂದೇ ದಿನದಲ್ಲಿ ಅವರನ್ನು ಹುದ್ದೆಯಿಂದ ಕೈಬಿಡಲಾಗಿದೆ. ಅವರ ಬದಲಿಗೆ ಸಂಜಯ್ ಮುಖರ್ಜಿ ಅವರನ್ನು ಹೊಸ ಡಿಜಿಪಿಯಾಗಿ ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ಚುನಾವಣಾ ಆಯೋಗ ಮಂಗಳವಾರ ಸೂಚಿಸಿದೆ.
ವಿವೇಕ್ ಸಹಾಯ್ ಅವರನ್ನು ಹಿರಿತನದ ಆಧಾರದ ಮೇಲೆ ಡಿಜಿಪಿಯಾಗಿ ನೇಮಕ ಮಾಡಲಾಗಿತ್ತು. ಆದರೆ ಲೋಕಸಭೆ ಚುನಾವಣೆ ಮುಗಿಯುವ ಮೊದಲೇ ಅಂದರೆ ಮೇ ಕೊನೆಯ ವಾರದಲ್ಲಿ ಅವರು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಹೀಗಾಗಿ ಅವರು ಆ ಸ್ಥಾನದಿಂದ ತಪ್ಪಿಸಿ, ಸಂಜಯ್ ಮುಖರ್ಜಿ ಅವರನ್ನು ಡಿಜಿಪಿಯಾಗಿ ನೇಮಿಸಲು ಆದೇಶಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
1989ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಸಂಜಯ್ ಮುಖರ್ಜಿ ಅವರು ಪಶ್ಚಿಮ ಬಂಗಾಳ ಸರ್ಕಾರವು ಡಿಜಿಪಿ ಹುದ್ದೆಗೆ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿದ ಮೂವರು ಅಧಿಕಾರಿಗಳ ಪಟ್ಟಿಯಲ್ಲಿ ಎರಡನೇ ವ್ಯಕ್ತಿಯಾಗಿದ್ದರು. ಮಂಗಳವಾರ ಸಂಜೆ 5 ಗಂಟೆಯೊಳಗೆ ತಕ್ಷಣಕ್ಕೆ ಜಾರಿಯಾಗುವಂತೆ ನೇಮಕ ಮಾಡಿ ಆದೇಶ ಹೊರಡಿಸಲು ಚುನಾವಣಾ ಆಯೋಗವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ನಿರ್ದೇಶನ ನೀಡಿದೆ.
ರಾಜೀವ್ಕುಮಾರ್ ಎತ್ತಂಗಡಿ:ಇದಕ್ಕೂ ಮೊದಲು ಚುನಾವಣಾ ಆಯೋಗವು ಡಿಜಿಪಿಯಾಗಿದ್ದ ರಾಜೀವ್ ಕುಮಾರ್ ಅವರನ್ನು ಸೋಮವಾರ ವರ್ಗ ಮಾಡಿ ಆದೇಶ ಹೊರಡಿಸಿತ್ತು. ಹಿರಿಯ ಪೊಲೀಸ್ ಅಧಿಕಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪರಮಾಪ್ತರಾಗಿ ಗುರುತಿಸಿಕೊಂಡಿದ್ದರು. ಇದರಿಂದಾಗಿ ರಾಜ್ಯದಲ್ಲಿ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ಅವರನ್ನು ಡಿಜಿಪಿ ಹುದ್ದೆಯಿಂದ ವಜಾ ಮಾಡಿತ್ತು.