ನವದೆಹಲಿ:ಅಮೆರಿಕದಿಂದ ಗಡಿಪಾರು ಮಾಡುತ್ತಿರುವ ಭಾರತೀಯರನ್ನು ಕರೆತರುವ ವೇಳೆ ಕೆಟ್ಟದಾಗಿ ನಡೆಸಿಕೊಳ್ಳದಂತೆ ಅಲ್ಲಿನ ಸರ್ಕಾರದ ಜೊತೆ ಮಾತುಕತೆ ನಡೆಸಲಾಗುವುದು. ಆದ್ರೆ ಗಡಿಪಾರು ಪ್ರಕ್ರಿಯೆಯು ಹೊಸದಲ್ಲ. ಇದು ದೀರ್ಘಕಾಲೀನವಾಗಿ ನಡೆಯುವ ಸಾಮಾನ್ಯ ಪ್ರಕ್ರಿಯೆ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ತಿಳಿಸಿದರು.
ಭಾರತೀಯರ ಗಡಿಪಾರಿನ ಬಗ್ಗೆ ವಿಪಕ್ಷಗಳ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಉತ್ತರಿಸಿದ ಸಚಿವರು, ಅಕ್ರಮವಾಗಿ ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆಗಳನ್ನು ವಾಪಸ್ ಕರೆತರಲಾಗುವುದು. ಇದು ಅಮೆರಿಕಕ್ಕೆ ಸೀಮಿತವಲ್ಲ ಎಂದು ಹೇಳಿದರು.
ಅಮೆರಿಕ ಅಕ್ರಮ ವಲಸಿಗರನ್ನು ಗಡೀಪಾರು ಮಾಡುತ್ತಿರುವುದು ಹೊಸ ಬೆಳವಣಿಗೆಯಲ್ಲ. ಬದಲಿಗೆ, ಹಲವಾರು ವರ್ಷಗಳಿಂದ ನಡೆಯುತ್ತಿರುವ ದೀರ್ಘಕಾಲೀನ ಪ್ರಕ್ರಿಯೆಯಾಗಿದೆ. ಅಕ್ರಮವಾಗಿ ವಲಸೆ ಹೋದವರು ಅಪರಾಧ ಚಟುವಟಿಕೆಗಳಿಗೆ ಬಲಿಯಾಗುತ್ತಿದ್ದಾರೆ. ಅಂಥವರು ಅಮಾನವೀಯ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಜೈಶಂಕರ್ ಸಂಸತ್ತಿನ ಮೇಲ್ಮನೆಗೆ ತಿಳಿಸಿದರು.
ಇದೇ ವೇಳೆ, 2009 ರಿಂದ ಅಮೆರಿಕವು ಎಷ್ಟು ಭಾರತೀಯರನ್ನು ಗಡಿಪಾರು ಮಾಡಿದೆ ಎಂಬ ಬಗ್ಗೆ ಅಂಕಿ ಅಂಶ ನೀಡಿದರು. ಇದರಲ್ಲಿ 2019 ರಲ್ಲಿ 2042, 2020 ರಲ್ಲಿ 1889 ವಲಸಿಗರನ್ನು ದೇಶದಿಂದ ಹೊರಹಾಕಿದ್ದು ಅತ್ಯಧಿಕವಾಗಿದೆ.
ಗಡಿಪಾರಾದವರಿಗೆ ಕೋಳ, ಸಂಕೋಲೆ :ಅಮೆರಿಕದಿಂದ ಗಡಿಪಾರಾದ ಭಾರತೀಯರನ್ನು ಅಲ್ಲಿನ ಅಧಿಕಾರಿಗಳು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸೇನಾ ವಿಮಾನ ಹತ್ತಿಸುವ ವೇಳೆ ಅಕ್ರಮ ವಲಸಿಗರನ್ನು ಕೈದಿಗಳಂತೆ ಕೈಗಳಿಗೆ ಕೋಳ, ಸಂಕೋಲೆ (ಚೈನ್) ಹಾಕಿ ಬಂಧಿಸಿ ಕರೆತಂದಿದ್ದಾರೆ. ಈ ಕುರಿತು ಅಮೆರಿಕದ ಗಡಿ ಗಸ್ತು ಪಡೆಯ ಮುಖ್ಯಸ್ಥ ಮಿಷೆಲ್ ಡಬ್ಲ್ಯೂ, ಬ್ಯಾಂಕ್ಸ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಅದರಲ್ಲಿ ಗಡಿಪಾರಾದ ಭಾರತೀಯರಿಗೆ ಕೈಕೋಳ ಹಾಕಿ ಸಂಕೋಲೆಗಳಿಂದ ಬಂಧಿಸಲಾಗಿದೆ. ಇದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉತ್ತಮ ಸ್ನೇಹಿತರಾಗಿದ್ದರೆ, ಭಾರತೀಯರ ಜೊತೆ ಇಷ್ಟು ಕೆಟ್ಟದಾಗಿ ಹೇಗೆ ನಡೆದುಕೊಳ್ಳಲು ಸಾಧ್ಯ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ. ಈ ಬಗ್ಗೆ ಅಮೆರಿಕ ಸರ್ಕಾರಕ್ಕೆ ಭಾರತ ದಿಟ್ಟ ಉತ್ತರ ನೀಡಬೇಕು. ಗಡಿಪಾರು ಆಗುತ್ತಿರುವವರ ಜೊತೆ ದುರ್ವರ್ತನೆ ತೋರದಂತೆ ಎಚ್ಚರಿಕೆ ರವಾನಿಸಬೇಕು ಎಂದು ಒತ್ತಾಯಿಸಿವೆ.
ಎಷ್ಟು ಮಂದಿ ಗಡಿಪಾರು? :ಮೊದಲ ಹಂತದಲ್ಲಿ ಅಮೆರಿಕದಿಂದ 104 ಮಂದಿ ಭಾರತೀಯರು ಗಡಿಪಾರಾಗಿದ್ದಾರೆ. ಅದರಲ್ಲಿ ಹರಿಯಾಣ ಮತ್ತು ಗುಜರಾತ್ನ ತಲಾ 33, ಪಂಜಾಬ್ನ 30, ಮಹಾರಾಷ್ಟ್ರ ಉತ್ತರಪ್ರದೇಶದ ತಲಾ ಮೂವರು, ಚಂಡೀಗಢದ ಇಬ್ಬರು ಇದ್ದಾರೆ.
ಸಮರ್ಪಕ ದಾಖಲೆ ಇಲ್ಲದೆ, ಅವಧಿ ಮೀರಿ ಅಮೆರಿಕದಲ್ಲಿ ನೆಲೆಸಿ ಗಡೀಪಾರಾಗುತ್ತಿರುವವರಿಗೆ ಭಾರತ ಸರ್ಕಾರ ಸೂಕ್ತ ಅನುಕೂಲ ಮಾಡಿಕೊಡಲಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಭರವಸೆ ನೀಡಿದ್ದಾರೆ.
ಇದನ್ನೂ ಓದಿ;ಅಕ್ರಮವಾಗಿ ಅಮೆರಿಕದಲ್ಲಿದ್ದ ಭಾರತೀಯರ ಗಡಿಪಾರು: ಮಧ್ಯಾಹ್ನ ಅಮೃತಸರಕ್ಕೆ ಮರಳಲಿರುವ 205 ಮಂದಿ