ಮೀರತ್ (ಉತ್ತರ ಪ್ರದೇಶ) :ಜಿಲ್ಲೆಯ ಕಂಕರಖೇಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ, ಕಾರು ಕದ್ದು ಓಡಿಹೋಗುತ್ತಿದ್ದ ದುಷ್ಕರ್ಮಿಗಳನ್ನು ಬೆನ್ನಟ್ಟುತ್ತಿದ್ದ ಸಬ್ಇನ್ಸ್ಪೆಕ್ಟರ್ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿರುವ ಘಟನೆ ಬೆಳಕಿಗೆ ಬಂದಿದೆ. ಇನ್ಸ್‌ಪೆಕ್ಟರ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲಾಖೆಯ ವತಿಯಿಂದ ನಾಲ್ಕು ತಂಡಗಳನ್ನು ರಚಿಸಿ ಅಪರಾಧಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ.
ಜಿಪಿಎಸ್ ಸಹಾಯದಿಂದ ಕಾರು ತಲುಪಿದ ಪೊಲೀಸರು: ಪೊಲೀಸರ ಪ್ರಕಾರ, ಮೀರತ್‌ನ ಕಂಕರಖೇಡ ಬೈಪಾಸ್ ಪ್ರದೇಶದ ಮದುವೆ ಮಂಟಪದ ಹೊರಗೆ ನಿಲ್ಲಿಸಿದ್ದ ಕಾರನ್ನು ಕೆಲವು ದುಷ್ಕರ್ಮಿಗಳು ಕದ್ದಿದ್ದಾರೆ. ವಿಷಯದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಜಿಪಿಎಸ್ ಸಹಾಯದಿಂದ ಕಾರು ಇರುವ ಜಾಗವನ್ನು ತಲುಪಿದ್ದಾರೆ. ಆದರೆ, ಈ ವೇಳೆ ಕಾರಿನಲ್ಲಿದ್ದ ದುಷ್ಕರ್ಮಿಗಳನ್ನು ಹಿಡಿಯಲು ಮುಂದಾದ ಪೊಲೀಸ್ ಸಿಬ್ಬಂದಿ ತಂಡದ ಮೇಲೆ ಪ್ರತಿಯಾಗಿ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಇನ್ಸ್‌ಪೆಕ್ಟರ್ ಎದೆಗೆ ಗುಂಡು ತಗುಲಿದೆ. ಇಡೀ ಘಟನೆ ನಿನ್ನೆ ತಡರಾತ್ರಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಪೊಲೀಸರ ಪ್ರಕಾರ, ದುಷ್ಕರ್ಮಿಗಳೊಂದಿಗಿನ ಎನ್‌ಕೌಂಟರ್ ಸಂದರ್ಭದಲ್ಲಿ ಔಟ್‌ಪೋಸ್ಟ್ ಇನ್‌ಚಾರ್ಜ್ ಮುನೇಶ್ ಸಿಂಗ್ ಅವರ ಎದೆಗೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಗುಂಡು ತಗುಲಿದ ನಂತರ ಮುನೇಶ್ ಸಿಂಗ್ ಅಲ್ಲೇ ಕುಸಿದು ಬಿದ್ದಿದ್ದಾರೆ. ಆಗ ಇತರ ಸಿಬ್ಬಂದಿ ಗಾಯಾಳುವನ್ನು ಚಿಕಿತ್ಸೆಗಾಗಿ ಗಾಜಿಯಾಬಾದ್‌ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇನ್ಸ್‌ಪೆಕ್ಟರ್ ಮುನೇಶ್ ಸಿಂಗ್ ಸ್ಥಿತಿ ಗಂಭೀರವಾಗಿದೆ. ಮುನೇಶ್ ಆಗ್ರಾದ ಚಿತ್ರಾ ಹತ್ ಜಿಲ್ಲೆಯ ಮಣಿಯಖೇಡ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಆಗಿದ್ದಾರೆ.