ಕೋಟಾ(ರಾಜಸ್ಥಾನ):'ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ರಾಜಧಾನಿ' ಎಂದೇ ಖ್ಯಾತವಾಗಿರುವ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಸರಣಿ ಸಾವು ಎಲ್ಲವನ್ನೂ ಬುಡಮೇಲು ಮಾಡಿದೆ. ವಿವಿಧ ಕೋರ್ಸ್ಗಳಿಗೆ ತರಬೇತಿ ಪಡೆಯಲು ಬರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಇಳಿಕೆ ಕಂಡರೆ, ಇಲ್ಲಿನ ಉದ್ಯಮಕ್ಕೂ ಭಾರೀ ಹೊಡೆತ ಬಿದ್ದಿದೆ.
ಕೋಚಿಂಗ್ ಸೆಂಟರ್‌ಗಳ ಹೊಸ ಮಾರ್ಗಸೂಚಿಗಳು, ಇತರ ನಗರಗಳಲ್ಲಿ ಉತ್ತಮ ಕೋಚಿಂಗ್ ಸಂಸ್ಥೆಗಳ ಆರಂಭ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಘಟನೆಗಳು ಸೇರಿದಂತೆ ಹಲವು ಕಾರಣಗಳಿಂದಾಗಿ ಇಲ್ಲಿಗೆ ತರಬೇತಿ ಪಡೆಯಲು ವಿದ್ಯಾರ್ಥಿಗಳು ನಿರಾಸಕ್ತಿ ತೋರುತ್ತಿದ್ದಾರೆ.
1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಇಳಿಕೆ:ಕೋಟಾದಲ್ಲಿ ತರಬೇತಿ ಪಡೆಯಲು ಬರುವ ವಿದ್ಯಾರ್ಥಿಗಳ ಸಂಖ್ಯೆ ಸಾಮಾನ್ಯವಾಗಿ 2 ರಿಂದ 2.5 ಲಕ್ಷದಷ್ಟಿತ್ತು. ಆದರೆ, 2024 ರಲ್ಲಿ ಇದು 85 ಸಾವಿರದಿಂದ 1 ಲಕ್ಷಕ್ಕೆ ಕುಸಿದಿದೆ. ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಘಟನೆಗಳು ದಾಖಲಾತಿ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಕೋಚಿಂಗ್ ಸೆಂಟರ್‌ಗಳ ಮಾಲೀಕರ ಅಭಿಪ್ರಾಯವಾಗಿದೆ.
ಪಾತಾಳಕ್ಕಿಳಿದ ವರಮಾನ:ತರಬೇತಿ ವಿದ್ಯಾರ್ಥಿಗಳ ಕೊರತೆಯಿಂದಾಗಿ ಇಲ್ಲಿನ ಉದ್ಯಮಕ್ಕೂ ಭಾರೀ ಪೆಟ್ಟು ಬಿದ್ದಿದೆ. ಹಾಸ್ಟೆಲ್, ಕೊಠಡಿಗಳ ಬಾಡಿಗೆ, ಹೋಟೆಲ್, ಕೋಚಿಂಗ್ ಸೆಂಟರ್ಗಳು ಬೀಗ ಹಾಕಿವೆ. ನಗರದ 4,500 ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 40ರಿಂದ 50ಕ್ಕೆ ಇಳಿದಿದೆ ಎಂದು ಯುನೈಟೆಡ್ ಕೌನ್ಸಿಲ್ ಆಫ್ ರಾಜಸ್ಥಾನ ಇಂಡಸ್ಟ್ರೀಸ್ ವಲಯದ ಅಧ್ಯಕ್ಷ ಗೋವಿಂದರಾಮ್ ಮಿತ್ತಲ್ ಹೇಳಿದ್ದಾರೆ.
ನಕಾರಾತ್ಮಕ ಪ್ರಚಾರದ ಪ್ರಭಾವ:ರಾಷ್ಟ್ರೀಯ ಅಪರಾಧ ದಾಖಲೆಗಳ ಕೇಂದ್ರದ (NCRB) ಪ್ರಕಾರ, ಕೋಟಾ ನಗರವು ಹೆಚ್ಚು ಆತ್ಮಹತ್ಯೆ ದಾಖಲಾಗುವ ನಗರಗಳ ಪಟ್ಟಿಯಲ್ಲಿ 50 ನಗರಗಳ ನಂತರದಲ್ಲಿದೆ. ಕೊಠಡಿಗಳ ಬಾಡಿಗೆ 15 ಸಾವಿರದಿಂದ 9 ಸಾವಿರಕ್ಕೆ ಇಳಿದಿದೆ. ಅನೇಕ ಹಾಸ್ಟೆಲ್‌ಗಳು ಖಾಲಿ ಇವೆ ಎಂದು ಹಾಸ್ಟೆಲ್ ಅಸೋಸಿಯೇಷನ್ ಅಧ್ಯಕ್ಷ ನವೀನ್ ಮಿತ್ತಲ್ ಬೇಸರಿಸಿದ್ದಾರೆ.
ಯಾವ ವರ್ಷ ಎಷ್ಟು ಸಾವು?:ಕೋಟಾ ಜಿಲ್ಲಾಡಳಿತವು 2015ರಿಂದ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಬಗ್ಗೆ ಅಧಿಕೃತ ಮಾಹಿತಿ ಸಂಗ್ರಹಿಸುತ್ತಿದೆ. ಇದರ ಪ್ರಕಾರ, 2024ರ ಅಕ್ಟೋಬರ್ವರೆಗೆ 15, 2023ರಲ್ಲಿ 28, 2022ರಲ್ಲಿ 15 ವಿದ್ಯಾರ್ಥಿಗಳ ಆತ್ಮಹತ್ಯೆ ದಾಖಲಾಗಿವೆ. 2019ರಲ್ಲಿ 18, 2018ರಲ್ಲಿ 20, 2017ರಲ್ಲಿ ಏಳು, 2016ರಲ್ಲಿ 17 ಮತ್ತು 2015ರಲ್ಲಿ 18 ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ. 2021 ಮತ್ತು 2020ರಲ್ಲಿ ಕೋವಿಡ್ನಿಂದಾಗಿ ಸಂಸ್ಥೆಗಳನ್ನು ಮುಚ್ಚಿದ್ದರಿಂದ ಯಾವುದೇ ಆತ್ಮಹತ್ಯೆಗಳಾಗಿಲ್ಲ.
ಇದನ್ನೂ ಓದಿ:ಪೊಲೀಸರಿಂದ ಅಶ್ರುವಾಯು ಪ್ರಯೋಗ, ಹಲವು ರೈತರಿಗೆ ಗಾಯ: ದೆಹಲಿ ಚಲೋ 2ನೇ ಸಲ ಸ್ಥಗಿತ