ಭುವನೇಶ್ವರ (ಒಡಿಶಾ) :ವಿಶ್ವಪ್ರಸಿದ್ಧ ಪುರಿಯ ಜಗನ್ನಾಥ ದೇವಾಲಯದ ಮೇಲೆ ಡ್ರೋನ್ ಹಾರಾಟ ನಿಷೇಧವಿದ್ದರೂ, ಅನಾಮಿಕ ವ್ಯಕ್ತಿಯೋರ್ವ ಈ ನಿಯಮ ಉಲ್ಲಂಘಿಸಿದ್ದಾನೆ. ಇದು ದೇವಸ್ಥಾನದ ಭದ್ರತೆಗೆ ಚ್ಯುತಿ ತಂದಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಭಾನುವಾರ ಮುಂಜಾನೆ 4:10 ರ ಸುಮಾರಿಗೆ ದೇವಸ್ಥಾನದ ಮೇಲೆ ಡ್ರೋನ್ ಹಾರಾಡಿದೆ. ಸುಮಾರು ಅರ್ಧ ಗಂಟೆ ಕಾಲ ದೇಗುಲದ ಸುತ್ತಲೂ ಸುಳಿದಾಡಿದೆ. ದೇವಸ್ಥಾನದ ಸುತ್ತಲೂ ಹಾರಾಟ ನಿಷೇಧ ವಲಯ (no flying area) ರಚಿಸಲಾಗಿದೆ. ಹೀಗಾಗಿ ಈ ನಿಯಮ ಉಲ್ಲಂಘನೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಡ್ರೋನ್ ಪತ್ತೆಗಾಗಿ ತಂಡ ರಚನೆ :ಈಘಟನೆ ಕುರಿತಂತೆ ತನಿಖೆ ನಡೆಸಲು ಪುರಿಯ ಪೊಲೀಸ್ ಅಧಿಕಾರಿಗಳು ವಿವಿಧ ತಂಡಗಳನ್ನು ರಚಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್, "ದೇವಸ್ಥಾನದ ಮೇಲೆ ಡ್ರೋನ್ ಹಾರಿಸುವುದು ಕಾನೂನುಬಾಹಿರ ಮತ್ತು ಸ್ವೀಕಾರಾರ್ಹವಲ್ಲ. ಭದ್ರತೆಯನ್ನು ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು" ಎಂದು ಹೇಳಿದರು.