ಚೆನ್ನೈ: ಸೋಮವಾರ ರಾತ್ರಿಯಿಂದ ತಮಿಳುನಾಡು ರಾಜಧಾನಿ ಚೆನ್ನೈ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ನವೆಂಬರ್ 11ರಿಂದ ಒಂದು ವಾರ ಕಾಲ ಮಳೆ ಸಾಧ್ಯತೆ ಕುರಿತು ಪ್ರಾದೇಶಿಕ ಹವಾಮಾನ ಕೇಂದ್ರ (ಆರ್ಎಂಸಿ) ಮುನ್ಸೂಚನೆ ನೀಡಿದೆ. ಮುಂದಿನ ಎರಡು ದಿನದಲ್ಲಿ ಚಂಡಮಾರುತವು ನಿಧಾನವಾಗಿ ತಮಿಳುನಾಡು ಮತ್ತು ಶ್ರೀಲಂಕಾದ ಪಶ್ಚಿಮದ ಕಡೆಗೆ ಸಾಗಲಿದೆ ಎಂದು ತಿಳಿಸಿದೆ.
ಚೆನ್ನೈ, ತಿರುವಳ್ಳೂರು, ಕಂಚೀಪುರಂ, ಚೆಂಗಲ್ಪಟ್ಟು, ಕಡಲೂರು, ಮಯೈದುಥುರೈ, ನಾಗಪಟ್ಟಿನಂ, ತಂಜಾವೂರು, ತಿರುವರೂರು ಪುದುಕೊಟ್ಟೈ, ರಾಮನಾಥಪುರಂ, ವಿಲ್ಲಪುರಂ ಜಿಲ್ಲೆ ಹಾಗೂ ಪುದುಚೇರಿ ಮತ್ತು ಕರೈಕಲ್ ಪ್ರದೇಶದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾರ್ಧಯತೆ ಇದೆ. ಚೆನ್ನೈನಲ್ಲಿ ಭಾರೀ ಮಳೆ ಹಿನ್ನೆಲೆ ಜಿಲ್ಲಾಧಿಕಾರಿ ರಶ್ಮಿ ಸಿದ್ಧಾರ್ಥ್ ಜಾಗಡೆ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಆದ್ರೆ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ.