ನವದೆಹಲಿ: ಗುರುವಾರ ರಾತ್ರಿ ಪೂರ್ವ ದಿಲ್ಲಿಯ ಶಹದಾರದಲ್ಲಿ ಪಟಾಕಿಗಳ ಸದ್ದಿನ ನಡುವೆ, ಗುಂಡುಗಳು ಸದ್ದು ಮಾಡಿವೆ. ಮೂರು ಜನರ ಮೇಲೆ ಗುಂಡು ಹಾರಿಸಲಾಗಿದ್ದು, ಅವರಲ್ಲಿ ಇಬ್ಬರು ಸಾವನ್ನಪ್ಪಿದರೆ, ಒಬ್ಬರ ಸ್ಥಿತಿ ಗಂಭೀರವಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಫರ್ಶ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗುರುವಾರ ರಾತ್ರಿ 8.30ರ ಸುಮಾರಿಗೆ ಈ ಗುಂಡಿನ ದಾಳಿ ನಡೆದಿರುವ ಬಗ್ಗೆ ಪಿಸಿಆರ್‌ಗೆ ಮಾಹಿತಿ ಲಭಿಸಿದೆ. ಮನೆಗೆ ನುಗ್ಗಿದ ದುಷ್ಕರ್ಮಿಗಳು ಒಬ್ಬರ ಹಿಂದೆ ಒಬ್ಬರಂತೆ ಮೂವರಿಗೆ ಗುಂಡು ಹಾರಿಸಿದ್ದಾರೆ. 40 ವರ್ಷದ ಆಕಾಶ್ ಮತ್ತು 16 ವರ್ಷದ ರಿಷಬ್ ಶರ್ಮಾ ಮೃತಪಟ್ಟಿದ್ದಾರೆ. 10 ವರ್ಷದ ಕ್ರಿಶ್ ಶರ್ಮಾ ಗಾಯಗೊಂಡಿದ್ದಾನೆ.
ಘಟನೆ ಬಗ್ಗೆ ಡಿಸಿಪಿ ಹೇಳಿದ್ದಿಷ್ಟು:ಗುರುವಾರ ಸಂಜೆ 8:30 ರ ಸುಮಾರಿಗೆ ಫರ್ಶ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಹಾರಿ ಕಾಲೋನಿಯಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಶಹದಾರ ಜಿಲ್ಲೆಯ ಡಿಸಿಪಿ ಪ್ರಶಾಂತ್ ಗೌತಮ್ ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು 40 ವರ್ಷದ ಆಕಾಶ್ ಮತ್ತು ಅವರ 16 ವರ್ಷದ ಸೋದರಳಿಯ ರಿಷಬ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು, ಆಕಾಶ್ ಅವರ ಮಗ ಕ್ರಿಶ್ ಶರ್ಮಾ ಅವರನ್ನು ಏಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಒಂದರ ನಂತರ ಒಂದರಂತೆ ಐದು ಗುಂಡುಗಳನ್ನು ಹಾರಿಸಿದ ದುಷ್ಕರ್ಮಿ:ಆಕಾಶ್ ಶರ್ಮಾ ತನ್ನ ಮಗ ಕ್ರಿಶ್ ಶರ್ಮಾ ಮತ್ತು ಸೋದರಳಿಯ ರಿಷಬ್ ಶರ್ಮಾ ಅವರೊಂದಿಗೆ ಮನೆಯ ಹೊರಗಡೆ ದೀಪಾವಳಿ ಆಚರಿಸುತ್ತಿದ್ದರು. ಈ ವೇಳೆ ಯುವಕನೊಬ್ಬ ಅಲ್ಲಿಗೆ ಬಂದು, ಒಂದರ ನಂತರ ಒಂದರಂತೆ ಐದು ಗುಂಡುಗಳನ್ನು ಹಾರಿಸಿದ್ದು, ಇದರಲ್ಲಿ ಆಕಾಶ್, ರಿಷಬ್ ಮತ್ತು ಕ್ರಿಶ್ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು ಎಂದು ಡಿಸಿಪಿ ತಿಳಿಸಿದ್ದಾರೆ. ಸ್ಥಳೀಯರು ತಕ್ಷಣ ಇವರನ್ನೆಲ್ಲರನ್ನೂ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಆಕಾಶ್ ಮತ್ತು ರಿಷಬ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ. ಸಮೀಪದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.
ಬಂಟಿ ಎಂಬ ಯುವಕ ಅಲ್ಲಿಗೆ ಬಂದು ಮೊದಲು ಪಾದ ಮುಟ್ಟಿ ಆಶೀರ್ವಾದ ಪಡೆದಿದ್ದಾನೆ ಎನ್ನಲಾಗಿದೆ. ಆಶೀರ್ವಾದ ಪಡೆದ ನಂತರ ಗುಂಡು ಹಾರಿಸಿದ್ದಾನೆ ಎಂದು ಮೃತರ ಕುಟುಂಬದವರು ಹೇಳಿದ್ದಾರೆ. ಬಂಟಿಯವರೊಂದಿಗೆ ಆಗಲೇ ಜಗಳ ಮಾಡಿಕೊಂಡಿದ್ದರು ಎನ್ನಲಾಗಿದೆ. ಮೇಲ್ನೋಟಕ್ಕೆ ಇದು ವೈಯಕ್ತಿಕ ದ್ವೇಷದ ಪ್ರಕರಣ ಎಂದು ತೋರುತ್ತದೆ. ಸಂತ್ರಸ್ತರ ಕುಟುಂಬದ ಸದಸ್ಯರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಮತ್ತು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ
ಇದನ್ನು ಓದಿ:ವ್ಯಕ್ತಿಯ ಪ್ರಾಣ ಉಳಿಸುವ ಭರದಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಆರು ಜನರ ಸಾವು
ನಕಲಿ ನೀಟ್ ಅಂಕಪಟ್ಟಿಯೊಂದಿಗೆ ಮದ್ರಾಸ್ ಮಡಿಕಲ್ ಕಾಲೇಜ್ ಸೇರಲು ಮುಂದಾದ ವಿದ್ಯಾರ್ಥಿ ಬಂಧನ