ನವದೆಹಲಿ:ಮಾನವನ ದೇಹ ಸೇರಿದರೆ ಯಾವುದೇ ಜೀವಿಯಾಗಲಿ ಸಾಯಲೇಬೇಕು. ಅಚ್ಚರಿ ಎಂದರೆ, ಇಲ್ಲೊಬ್ಬ ಯುವಕನ ಹೊಟ್ಟೆಯಲ್ಲಿ ವೈದ್ಯರು ಜೀವಂತವಾದ ಜಿರಳೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ಹೊಟ್ಟೆ ನೋವೆಂದು ಯುವಕ ಆಸ್ಪತ್ರೆಗೆ ಬಂದಾಗಲೇ ಆತನ ಕರುಳಿನಲ್ಲಿ ಇಂಥದ್ದೊಂದು ಜೀವಿ ಇದೆ ಎಂದು ಗೊತ್ತಾಗಿದ್ದು.
ಅಚ್ಚರಿಯಾದರೂ ಇದು ನಿಜ. ದಿಲ್ಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಈ ವಿದ್ಯಮಾನ ನಡೆದಿದೆ. 23 ವರ್ಷದ ಯುವಕ ಕೆಲ ದಿನಗಳಿಂದ ಹೊಟ್ಟೆ ನೋವಿಗೆ ತುತ್ತಾಗಿದ್ದ. ಎಂಡೋಸ್ಕೋಪ್ ಪರೀಕ್ಷೆ ಮಾಡಿದಾಗ ಹೊಟ್ಟೆಯಲ್ಲಿ ಏನೋ ಜಂತುವಿದೆ ಎಂದು ವೈದ್ಯರು ಗ್ರಹಿಸಿದ್ದರು. ತಕ್ಷಣವೇ ಆಪರೇಷನ್ ನಡೆಸಿ ಯುವಕನನ್ನು ಪ್ರಾಣಾಪಾಯದಿಂದ ಕಾಪಾಡಿದ್ದಾರೆ.
ವೈದ್ಯರು ಹೇಳಿದ್ದೇನು?ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನನ್ನು ಎಂಡೋಸ್ಕೋಪಿ ತಪಾಸಣೆ ನಡೆಸಲಾಯಿತು. ಈ ವೇಳೆ ಸಣ್ಣಕರುಳಿನಲ್ಲಿ ಜಿರಳೆ ಇರುವ ಬಗ್ಗೆ ಪತ್ತೆಯಾಗಿದೆ. ತಕ್ಷಣವೇ ವೈದ್ಯರು ಶಸ್ತ್ರಚಿಕಿತ್ಸೆಗೆ ಸೂಚಿಸಿದ್ದಾರೆ. ಬಳಿಕ ವೈದ್ಯರ ತಂಡ ರೋಗಿಯ ಸಣ್ಣ ಕರುಳಿನಲ್ಲಿ ಜೀವಂತ ಜಿರಳೆಯನ್ನು ಹೊರತೆಗೆಯಲು ಎಂಡೋಸ್ಕೋಪಿಯ ಮೊರೆ ಹೋಗಿದ್ದಾರೆ. ಒಂದು ಟ್ಯೂಬ್ನಲ್ಲಿ ಗಾಳಿ ಮತ್ತು ನೀರನ್ನು ಸರಬರಾಜ ಮಾಡಿದರೆ, ಇನ್ನೊಂದರ ಮೂಲಕ ಜಿರಳೆಯನ್ನು ಹೀರಿಕೊಳ್ಳುವಂತೆ ಮಾಡಿದ್ದಾರೆ.
ಎಂಡೋಸ್ಕೋಪಿಯ ಟ್ಯೂಬ್ಗಳು ಯುವಕನ ಹೊಟ್ಟೆಯೊಳಗೆ ಕಳುಹಿಸಿ, ಜಿರಳೆ ಸಿಕ್ಕಿಕೊಂಡ ಭಾಗದಲ್ಲಿ ಟ್ಯೂಬ್ನಿಂದ ಎಳೆಯಲಾಗಿದೆ. ಆಗ ಜಿರಳೆ ಟ್ಯೂಬ್ನೊಳಕ್ಕೆ ಬಂದಿದೆ. ರೋಗಿಯ ದೇಹದಿಂದ 3 ಸೆಂ.ಮೀ ಉದ್ದದ ಜಿರಳೆಯನ್ನು ಹೊರತೆಗೆಯಲಾಗಿದೆ. ಇದೆಲ್ಲಾ ಪ್ರಕ್ರಿಯೆ ಕೇವಲ 10 ನಿಮಿಷದಲ್ಲಿ ನಡೆದಿರುವುದು ವಿಶೇಷ.
ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಹಿರಿಯ ಸಲಹೆಗಾರ ಡಾ.ಶುಭಮ್ ವಾಟ್ಸ್ ಮಾತನಾಡಿ, ಆಸ್ಪತ್ರೆಗೆ ಬಂದ ಯುವಕ 2-3 ದಿನಗಳಿಂದ ಹೊಟ್ಟೆ ನೋವು ಮತ್ತು ಅಜೀರ್ಣದಿಂದ ಬಳಲುತ್ತಿದ್ದ. ವೈದ್ಯರ ತಂಡವು ಎಂಡೋಸ್ಕೋಪಿ ಪರೀಕ್ಷೆ ನಡೆಸಿದಾಗ ನಿಜವಾದ ಕಾರಣ ಅರ್ಥವಾಯಿತು. ಸಣ್ಣ ಕರುಳಿನಲ್ಲಿ ಜೀವಂತ ಜಿರಳೆ ಸಿಕ್ಕಿಹಾಕಿಕೊಂಡಿರುವುದು ಕಂಡುಬಂದಿತು. ಅದೇ ಎಂಡೋಸ್ಕೋಪಿ ಮೂಲಕ ಈಗ ಜೀವಂತ ಜಿರಳೆಯನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಕರುಳಿನಲ್ಲಿ ಜೀವಂತ ಜಿರಳೆ ಹಾಗೆಯೇ ಇದ್ದಲ್ಲಿ ಜೀವಕ್ಕೆ ಅಪಾಯವಿತ್ತು. ಶಸ್ತ್ರಚಿಕಿತ್ಸೆ ಬಳಿಕ ಯುವಕ ಆರೋಗ್ಯವಾಗಿದ್ದಾನೆ ಎಂದು ತಿಳಿಸಿದರು.
ಜಿರಳೆ ಹೊಟ್ಟೆ ಸೇರಿದ್ಹೇಗೆ?ಜಿರಳೆ ಯುವಕನ ಹೊಟ್ಟೆ ಸೇರಿದ್ದೇ ಅಚ್ಚರಿಯ ಸಂಗತಿ. ಊಟ ಮಾಡುವಾಗ ಅಥವಾ ಮಲಗಿರುವಾಗ ಆತನ ದೇಹವನ್ನು ಹೊಕ್ಕಿರಬೇಕು ಎಂದು ವೈದ್ಯರು ಅಂದಾಜಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಜಿರಳೆಯನ್ನು ಹೊರತೆಗೆಯದೇ ಇದ್ದಲ್ಲಿ ಸೋಂಕು ತಗುಲಿ ಪ್ರಾಣಕ್ಕೆ ಕುತ್ತು ಉಂಟಾಗುವ ಸಾಧ್ಯತೆಯೂ ಇತ್ತು.
ಇದನ್ನೂ ಓದಿ:ಚಳಿಗಾಲದಲ್ಲಿ ಹಿಮ ಆವೃತ: ನವೆಂಬರ್ 17ಕ್ಕೆ ಬದರಿನಾಥ್ ದೇವಸ್ಥಾನ ಬಾಗಿಲು ಬಂದ್