ಬೆಂಗಳೂರು: ಹೊಸ ವರ್ಷಾಚರಣೆಗೆ ಇನ್ನೊಂದೇ ದಿನ ಬಾಕಿ ಉಳಿದಿದ್ದು, ಮುಂಜಾಗ್ರತಾ ಕ್ರಮವಾಗಿ ನಗರದೆಲ್ಲೆಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಕೈಗೊಂಡ ಅಂತಿಮ ಹಂತದ ಭದ್ರತೆ ಬಗ್ಗೆ ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಖುದ್ದು ತೆರಳಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಸಲಹೆ, ಸೂಚನೆಗಳನ್ನು ನೀಡಿದರು.
ಹೊಸ ವರ್ಷದ ಸಂಭ್ರಮಾಚರಣೆಯ ಪ್ರಮುಖ ಹಾಟ್ ಸ್ಪಾಟ್ ಆಗಿರುವ ಎಂ. ಜಿ. ರಸ್ತೆ ಹಾಗೂ ಬಿಗ್ರೇಡ್ ರಸ್ತೆಗಳಿಗೆ ಪೊಲೀಸ್ ಆಯುಕ್ತರು ತೆರಳಿ ಕೈಗೊಂಡ ಭದ್ರತೆ ಕುರಿತು ಮಾಹಿತಿ ಪಡೆದುಕೊಂಡರು. ಆಯುಕ್ತರ ಕಚೇರಿಯಲ್ಲಿರುವ ಕಂಟ್ರೋಲ್ ರೂಮ್ ಹಾಗೂ ಕಮಾಂಡ್ ಸೆಂಟರ್ಗೆ ತೆರಳಿ ಸಿಸಿಟಿವಿ ಕ್ಯಾಮರಾಗಳ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸಿದರು.
ಅಸಭ್ಯ ವರ್ತನೆ ಕಂಡುಬಂದರೆ ಕ್ರಮ: ಮಾಧ್ಯಮಗಳೊಂದಿಗೆ ಮಾತನಾಡಿದ ದಯಾನಂದ, ''ಪ್ರತಿ ವರ್ಷದಂತೆ ಈ ಬಾರಿಯೂ ನಗರದೆಲ್ಲೆಡೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎಂ.ಜಿ.ರೋಡ್, ಬಿಗ್ರೇಡ್ ರೋಡ್ ಹಾಗೂ ಚರ್ಚ್ ಸ್ಟ್ರೀಟ್ ಗಳ್ಲಲಿ ನಿಗದಿಗಿಂತ ಈ ಬಾರಿ ತಾತ್ಕಾಲಿಕವಾಗಿ 300 ಸಿಸಿಟಿವಿ ಅಳವಡಿಸಲಾಗಿದೆ. ಆಯಾ ವಿಭಾಗದ ಮೇಲಾಧಿಕಾರಿಗಳಿಗೆ ಭದ್ರತೆ ಬಗ್ಗೆ ಹೆಚ್ಚು ನಿಗಾವಹಿಸುವಂತೆ ತಿಳಿಸಲಾಗಿದೆ'' ಎಂದರು.
''ಸಾರ್ವಜನಿಕರು ಸಂಭ್ರಮಾಚರಣೆಯನ್ನ ಶಾಂತಿಯುತವಾಗಿ ಅಚರಿಸಬೇಕು. ನಿಗದಿತ ಸಮಯದೊಳಗೆ ಮಾತ್ರ ನ್ಯೂ ಇಯರ್ ಸೆಲೆಬ್ರೇಷನ್ ಮಾಡಬೇಕು. ಪಾನಮತ್ತರಾಗಿ ಅಸಭ್ಯ ವರ್ತನೆ ಕಂಡುಬಂದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು'' ಎಂದು ಆಯುಕ್ತರು ಎಚ್ಚರಿಕೆ ನೀಡಿದ್ಧಾರೆ.
ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಕಣ್ಗಾವಲಿಡಲು ಪೊಲೀಸ್ ಸಿಬ್ಬಂದಿಗೆ 63 ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಕರ್ತವ್ಯಕ್ಕೆ ನೇಮಕ ಮಾಡಲಾಗುವ ಸಿಬ್ಬಂದಿಗೆ ಬೈನಾಕ್ಯುಲರ್ ಉಪಕರಣಗಳನ್ನು ಒದಗಿಸಲಾಗಿದೆ. ಜೊತೆಗೆ, ಸಾರ್ವಜನಿಕ ಸಂಭ್ರಮಾಚರಣೆಗಳು ನಡೆಯುವ ಸ್ಥಳಗಳಲ್ಲಿ ಒಟ್ಟು 817 ಸಿಸಿಟಿವಿ ವೀಕ್ಷಣಾ ಘಟಕಗಳನ್ನು ನಿರ್ಮಿಸಲಾಗಿದೆ.
ಇದನ್ನೂ ಓದಿ: ನಾಳೆ ಸಂಜೆಯಿಂದ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ: ಈ ಜಿಲ್ಲೆಗಳ ಪ್ರವಾಸಿ ತಾಣಗಳಿಗೂ ನೋ ಎಂಟ್ರಿ