ಹೈದರಾಬಾದ್: ತೆಲಂಗಾಣದ ದೇವಸ್ಥಾನ ಸಮಿತಿಗಳಲ್ಲಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ಸಂಯೋಜಕರನ್ನು ನೇಮಿಸುವ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್, ಭಾನುವಾರ ತೆಲಂಗಾಣದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಂಡಿ ಸಂಜಯ್ ಕುಮಾರ್, ದೇವಾಲಯಗಳು ರಾಜಕೀಯ ಪುನರ್ವಸತಿ ಕೇಂದ್ರಗಳಲ್ಲ ಎಂದು ಹೇಳಿದ್ದು, ಮಸೀದಿ ಮತ್ತು ಚರ್ಚುಗಳ ವಿಷಯದಲ್ಲಿ ಕೂಡ ಸರ್ಕಾರ ಇದೇ ಧೈರ್ಯವನ್ನು ಪ್ರದರ್ಶಿಸಲಿದೆಯೇ ಎಂದು ಸವಾಲು ಹಾಕಿದ್ದಾರೆ.
"ದೇವಾಲಯಗಳು ನಂಬಿಕೆಯ ಸ್ಥಳಗಳಾಗಿವೆಯೇ ಹೊರತು ರಾಜಕೀಯ ಪುನರ್ವಸತಿ ಕೇಂದ್ರಗಳಲ್ಲ. ಹಿಂದೂ ದೇವಾಲಯ ಸಮಿತಿಗಳಲ್ಲಿ ಜಾತ್ಯತೀತತೆಯ ನಿರೂಪಣೆಗಳನ್ನು ರೂಪಿಸಲು 'ಸಾಮಾಜಿಕ ಮಾಧ್ಯಮ ಸಂಯೋಜಕರನ್ನು' ನೇಮಿಸುವುದು ತಪ್ಪು ಮತ್ತು ಇದು ಹಿಂದೂಗಳ ಆಧ್ಯಾತ್ಮಿಕ ನಂಬಿಕೆಗೆ ಧಕ್ಕೆ ತರುತ್ತದೆ" ಎಂದು ಬಂಡಿ ಸಂಜಯ್ ಬರೆದಿದ್ದಾರೆ.
"ಮಸೀದಿ ಮತ್ತು ಚರ್ಚ್ಗಳ ವಿಷಯದಲ್ಲಿ ಕೂಡ ಇದೇ ರೀತಿಯ ನೇಮಕಗಳನ್ನು ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುವ ಧೈರ್ಯ ಕಾಂಗ್ರೆಸ್ ಪಕ್ಷಕ್ಕಿದೆಯೇ? ಅಥವಾ ಇದು ಕೇವಲ ಹಿಂದೂ ದೇವಾಲಯಗಳಿಗೆ ಮಾತ್ರವೇ?" ಎಂದು ಅವರು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಮೊದಲು ದೇವಾಲಯಗಳನ್ನು ರಕ್ಷಿಸಬೇಕು ಮತ್ತು ಅವುಗಳ ನಿಜವಾದ ಸಾರವನ್ನು ಕಾಪಾಡಬೇಕು ಎಂದು ಅವರು ಹೇಳಿದರು.