ಕರ್ನಾಟಕ

karnataka

ETV Bharat / bharat

ಲೋಕಸಭೆಯಲ್ಲಿ ದಲಿತರಿಗೆ ಅವಮಾನ ಗದ್ದಲ: ಡಿಎಂಕೆ ವಿರುದ್ಧ ಮುಗಿಬಿದ್ದ ಬಿಜೆಪಿ

ಲೋಕಸಭೆಯಲ್ಲಿ ಕೇಂದ್ರ ಸಚಿವ ಮರುಗನ್​ ಅವರನ್ನು ಡಿಎಂಕೆ ಸಂಸದರು ಅಸಮರ್ಥ ಎಂದು ಟೀಕಿಸಿದ್ದು, ತೀವ್ರ ಗದ್ದಲಕ್ಕೆ ಕಾರಣವಾಯಿತು.

By ANI

Published : Feb 6, 2024, 5:36 PM IST

Updated : Feb 6, 2024, 6:38 PM IST

ಕೇಂದ್ರ ಸಚಿವ ಮುರುಗನ್
ಕೇಂದ್ರ ಸಚಿವ ಮುರುಗನ್

ಲೋಕಸಭೆಯಲ್ಲಿ ದಲಿತರಿಗೆ ಅವಮಾನ ಗದ್ದಲ

ನವದೆಹಲಿ:ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದ ಟಿ.ಆರ್.ಬಾಲು ಅವರು ಕೇಂದ್ರ ಸಚಿವ ಎಲ್.ಮುರುಗನ್ ಅವರನ್ನು 'ಸಚಿವರಾಗಲು ಅನರ್ಹ' ಎಂದು ದೂಷಿಸಿದರು. ಇದು ಲೋಕಸಭೆಯಲ್ಲಿ ಮಂಗಳವಾರ ಭಾರೀ ಗದ್ದಲ ಉಂಟುಮಾಡಿತು. ಪರಿಶಿಷ್ಟ ಜಾತಿಯ ಮುರುಗನ್​ ಅವರನ್ನು ದೂಷಿಸಿದ್ದು, ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಬಿಜೆಪಿ ಆರೋಪಿಸಿತು. ಇದರ ಜೊತೆಗೆ ಸಚಿವರ ಬಳಿ ಕ್ಷಮೆ ಕೋರುವಂತೆಯೂ ಆಗ್ರಹಿಸಿತು.

ನಡೆದಿದ್ದೇನು?:ಮಂಗಳವಾರದ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಡಿಎಂಕೆ ಸಂಸದರಾದ ಎ.ರಾಜಾ ಮತ್ತು ಎ.ಗಣೇಶಮೂರ್ತಿ ಅವರು, ತಮಿಳುನಾಡಿನಲ್ಲಿ ಈಚೆಗೆ ಉಂಟಾದ ಪ್ರಕೃತಿ ವಿಕೋಪದ ಹಾನಿಯ ಕುರಿತು ಚರ್ಚೆ ನಡೆಸುತ್ತಿದ್ದರು. ರಾಜ್ಯದ ಹಲವು ನಗರಗಳಲ್ಲಿ ಅತಿ ಹೆಚ್ಚು ಮಳೆಯಾಗಿ ಪ್ರವಾಹ ಉಂಟಾಗಿತ್ತು. ನೈಸರ್ಗಿಕ ವಿಕೋಪ ಎದುರಿಸಲು ಕೇಂದ್ರ ಸರ್ಕಾರ ಯಾವುದೇ ತಂಡವನ್ನು ಕಳುಹಿಸಲಿಲ್ಲ. 8 ಜಿಲ್ಲೆಗಳು ವಿಪರೀತ ಹಾನಿಗೀಡಾಗಿದ್ದವು. ಪರಿಹಾರ ಕಾರ್ಯಾಚರಣೆಗಳಿಗೆ ರಾಜ್ಯ ಸರ್ಕಾರ ಕೋರಿದಷ್ಟು ಅನುದಾನವನ್ನೂ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಈ ವೇಳೆ ಶ್ರೀಪೆರಂಬಂದೂರಿನ ಸಂಸದ ಹಾಗು ಕೇಂದ್ರ ಸಚಿವ ಮರುಗನ್​ ಮಾತನಾಡಲು ಮುಂದಾದಾಗ, ಡಿಎಂಕೆ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು. ನೀವ್ಯಾಕೆ ಮಧ್ಯಪ್ರವೇಶಿಸುತ್ತೀರಿ?. ದಯವಿಟ್ಟು ಕುಳಿತುಕೊಳ್ಳಿ. ನೀವು ಸಂಸತ್ತಿನ ಸದಸ್ಯ ಮತ್ತು ಮಂತ್ರಿಯಾಗಲು ಯೋಗ್ಯತೆ ಇಲ್ಲ ಎಂದು ಟೀಕಿಸಿದರು. ಇದು ತೀವ್ರ ಗದ್ದಲಕ್ಕೆ ಕಾರಣವಾಯಿತು. ಡಿಎಂಕೆ ಸಂಸದರ ಈ ಹೇಳಿಕೆ ಬಿಜೆಪಿಗರನ್ನು ಕೆರಳಿಸಿತು. ಕೇಂದ್ರ ಸಚಿವರನ್ನು 'ಅಸಮರ್ಥ' ಎಂದು ಕರೆಯಲು ಹೇಗೆ ಸಾಧ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಅರ್ಜುನ್ ರಾಮ್ ಮೇಘವಾಲ್ ಸದನದಲ್ಲಿ ಎದ್ದು ನಿಂತು ಪ್ರಶ್ನಿಸಿದರು.

ದಲಿತರಿಗೆ ಮಾಡಿದ ಅವಮಾನ:ಮರುಗನ್​ ಅವರು ದಲಿತ ಸಮುದಾಯದ ಪ್ರತಿನಿಧಿ. ಆ ಸಮುದಾಯದಿಂದ ಬಂದ ವ್ಯಕ್ತಿ ಕೇಂದ್ರದ ಸಚಿವರಾಗಿದ್ದಾರೆ. ಎಸ್​ಸಿ ವ್ಯಕ್ತಿಯನ್ನು ಸಚಿವರಾಗಿರಲು ಅನರ್ಹ ಎಂದು ಟೀಕಿಸುವ ಮೂಲಕ ಇಡೀ ದಲಿತ ಸಮುದಾಯಕ್ಕೆ ಡಿಎಂಕೆ ಅವಮಾನ ಮಾಡಿದೆ ಎಂದು ಸಚಿವ ಜೋಶಿ ಆರೋಪಿಸಿದರು.

ಅಸಂಬದ್ಧ ಪ್ರಶ್ನೆ ಕೇಳುತ್ತಿದ್ದ ಡಿಎಂಕೆ ಸಂಸದರನ್ನು ತಡೆದ ಸಚಿವರನ್ನೇ ಅಸಮರ್ಥ ಎಂದು ಜರಿಯುವುದು ಸರಿಯೇ?. ದಲಿತರು, ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ಅನರ್ಹ ಎಂದು ಕರೆದಿದ್ದಾರೆ. ಇದು ದಲಿತ ಸಮುದಾಯಕ್ಕೆ ಮಾಡಿದ ಅಪಮಾನ. ಮುರುಗನ್​ ಅವರ ಬಳಿಕ ಡಿಎಂಕೆ ಕ್ಷಮೆಯಾಚಿಸಬೇಕು ಎಂಧು ಇನ್ನೊಬ್ಬ ಕೇಂದ್ರ ಸಚಿವ ಅರ್ಜುನ್​ ರಾಮ್​ ಮೇಘವಾಲ್ ಅವರು ಪಟ್ಟು ಹಿಡಿದರು.

ಇದನ್ನೂ ಓದಿ:ಯುಸಿಸಿ ಮಸೂದೆ ಮಂಡಿಸಿದ ಉತ್ತರಾಖಂಡ ಸರ್ಕಾರ: ಸಂಹಿತೆಯಲ್ಲಿವೆ ಈ ಮಹತ್ವದ ಅಂಶಗಳು

Last Updated : Feb 6, 2024, 6:38 PM IST

ABOUT THE AUTHOR

...view details