ಚಿತ್ತೂರು, ಆಂಧ್ರಪ್ರದೇಶ: ದೇವಾಲಯದ ಸಿಬ್ಬಂದಿ ಮಹಿಳಾ ಭಕ್ತೆಯೊಬ್ಬರು ದೇವಾಲಯದೊಳಗೆ ಬಿಟ್ಟು ಬೀಗ ಹಾಕಿ ಹೊರಟು ಹೋದ ವಿಚಿತ್ರ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ದೇವಾಲಯಕ್ಕೆ ಬೀಗ ಹಾಕಿದ್ದರಿಂದ ಭಕ್ತೆ ರಾತ್ರಿಯಿಡೀ ದೇವಸ್ಥಾನದಲ್ಲಿ ಒಬ್ಬಳೇ ಕಾಲ ಕಳೆಯಬೇಕಾದ ಪರಿಸ್ಥಿತಿ ಬಂದೊದಗಿತ್ತು.
ಜಿಲ್ಲೆಯ ಬೋಯಕೊಂಡ ಗಂಗಮ್ಮನ ದರ್ಶನಕ್ಕೆ ಬಂದಿದ್ದ ಮಹಿಳಾ ಭಕ್ತೆಯೊಬ್ಬರಿಗೆ ಈ ಕಹಿ ಅನುಭವವಾಗಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದರಿಂದ ದೇವಸ್ಥಾನದ ಸಿಬ್ಬಂದಿ ಮೇಲೆ ಟೀಕೆಗಳ ಸುರಿಮಳೆಯಾಗುತ್ತಿದೆ.
ದೇವಸ್ಥಾನದ ಸಿಬ್ಬಂದಿ ಈ ಬಗ್ಗೆ ಹೇಳುವುದಿಷ್ಟು: ಸೋಮಲ ಮಂಡಲದ ದಿವ್ಯಾಂಗ ಭಕ್ತೆಯೊಬ್ಬರು ಮಂಗಳವಾರ ಬೋಯಕೊಂಡ ಗಂಗಮ್ಮ ಅಮ್ಮನವರ ದರ್ಶನಕ್ಕೆ ಬಂದಿದ್ದರು. ಆದರೆ, ಆಗಲೇ ರಾತ್ರಿ ಆಗಿದ್ದರಿಂದ ದೇವಸ್ಥಾನದ ಸಿಬ್ಬಂದಿ ದೇವಸ್ಥಾನದಲ್ಲಿ ಆಕೆ ಇರುವುದನ್ನು ಗಮನಿಸದೇ ಬಾಗಿಲು ಹಾಕಿಕೊಂಡು ತೆರಳಿದ್ದರು. ಹಾಗಾಗಿ ರಾತ್ರಿಯಿಡೀ ದೇವಸ್ಥಾನದಲ್ಲಿ ಒಬ್ಬಳೇ ಇದ್ದರು. ಬುಧವಾರ ಬೆಳಗ್ಗೆ ಅಲ್ಲಿ ಕೆಲಸ ಮಾಡುತ್ತಿದ್ದ ಸ್ವಚ್ಛತಾ ಸಿಬ್ಬಂದಿಯೊಬ್ಬರು ವಿಕಲಚೇತನ ಮಹಿಳೆಯನ್ನು ಗುರುತಿಸಿ ದೇವಸ್ಥಾನದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಅಲ್ಲಿಗೆ ಆಗಮಿಸಿದ ದೇವಸ್ಥಾನದ ಸಿಬ್ಬಂದಿ, ಅಂಗವಿಕಲ ಭಕ್ತೆಯನ್ನು ರಕ್ಷಿಸಿದರು. ಈ ವಿಷಯ ದೇವಸ್ಥಾನದ ಇಒ ಏಕಾಂಬರಂ ಅವರ ಬಳಿ ಹೋಗಿದ್ದು, ಅವರು ವಿಕಲಚೇತನ ಮಹಿಳೆಯ ವಿವರ ಸಂಗ್ರಹಿಸಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ, ಈ ವಿಷಯ ಹೊರ ಬೀಳುತ್ತಿದ್ದಂತೆ ದೇವಸ್ಥಾನದ ಸಿಬ್ಬಂದಿ ವರ್ತನೆ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.
ಇದು ನಿಮ್ಮ ಕೆಲಸ ಅಲ್ಲವೇ?: ದೇವಸ್ಥಾನ ಮುಚ್ಚುವ ವೇಳೆ, ಆಲಯದ ಒಳಗೆ ಭಕ್ತರು ಇದ್ದಾರೆಯೇ ಇಲ್ಲವೋ ಎಂಬುದನ್ನು ಪರಿಶೀಲಿಸುವುದು ದೇವಸ್ಥಾನದ ಸಿಬ್ಬಂದಿ ಕರ್ತವ್ಯ ಅಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಹಾಗಾದರೆ, ಸಿಬ್ಬಂದಿ ಮತ್ತು ಅರ್ಚಕರಿಗೆ ಎಷ್ಟು ಜವಾಬ್ದಾರಿ ಇದೆ ಎಂಬುದು ಗೊತ್ತಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಭಕ್ತರು.
ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದ ಇಒ: ಈ ಕುರಿತು ದೇವಸ್ಥಾನದ ಇಒ ಅವರನ್ನು ವಿವರಣೆ ಕೇಳಿದಾಗ, ರಾತ್ರಿ ವೇಳೆ ದೇವಸ್ಥಾನದಲ್ಲಿ ವಿಕಲಚೇತನ ಮಹಿಳೆ ಇದ್ದಿದ್ದು ನಿಜ ಎಂದರು. ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದರೆ ಆಕೆ ಮರಗಳ ಕೆಳಗೆ ಇರುವುದು ಪತ್ತೆಯಾಗಿದೆ. ಸಿಬ್ಬಂದಿ ಇದನ್ನು ಗಮನಿಸದೇ ಬೀಗ ಹಾಕಿಕೊಂಡು ಹೋಗಿದ್ದಾರೆ. ಈ ಬಗ್ಗೆ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಒ ತಿಳಿಸಿದ್ದಾರೆ.
ಇದನ್ನು ಓದಿ:ಹಳದಿ ನಿಲುವಂಗಿ, ಬಿಳಿ ಧೋತಿ: ಅಯೋಧ್ಯೆ ರಾಮ ಮಂದಿರದ ಅರ್ಚಕರಿಗೆ ವಿಶಿಷ್ಟ ಡ್ರೆಸ್ಕೋಡ್