ನವದೆಹಲಿ: ದೀಪಾವಳಿ ಹಬ್ಬದ ನಿಮಿತ್ತ ಲಡಾಖ್ನ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ) ಉದ್ದಕ್ಕೂ ಹಲವಾರು ಗಡಿ ಪೋಸ್ಟ್ಗಳಲ್ಲಿ ನಿಯೋಜಿತರಾಗಿರುವ ಭಾರತ ಮತ್ತು ಚೀನಾ ಸೈನಿಕರು ಗುರುವಾರ ಸಿಹಿ ವಿನಿಮಯ ಮಾಡಿಕೊಂಡರು. ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್ನ ಎಲ್ಎಸಿಯಲ್ಲಿ ಭಾರತ ಮತ್ತು ಚೀನಾಗಳೆರಡೂ ತಮ್ಮ ಸೇನೆಯನ್ನು ಹಿಂತೆಗೆಯುವ ಪ್ರಕ್ರಿಯೆ ಮುಗಿಯುತ್ತಿರುವ ಮಧ್ಯೆ ಯೋಧರು ಪರಸ್ಪರ ಸಿಹಿ ಹಂಚಿಕೊಂಡಿದ್ದಾರೆ.
ದೀಪಾವಳಿಯಂದು ಎಲ್ಎಸಿ ಉದ್ದಕ್ಕೂ ಹಲವಾರು ಗಡಿ ಸ್ಥಳಗಳಲ್ಲಿ ಭಾರತ ಮತ್ತು ಚೀನಾದ ಯೋಧರು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಂಡರು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಅರುಣಾಚಲ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಹೇಳಿದರು.
ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದ ಸೇನೆ ಹಿಂಪಡೆಯುವಿಕೆ:ಪೂರ್ವ ಲಡಾಖ್ನ ಎಲ್ಎಸಿಯಲ್ಲಿ ಭಾರತ ಮತ್ತು ಚೀನಾ ನಡುವಿನ ಸೇನೆ ಹಿಂಪಡೆಯುವ ಪ್ರಕ್ರಿಯೆಯು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು, ಉಭಯ ಸೇನೆಗಳು ಸ್ಥಾನಗಳ ಪರಿಶೀಲನೆ ನಡೆಸಿವೆ ಮತ್ತು ಶಿಬಿರಗಳನ್ನು ಕಿತ್ತುಹಾಕಲು ಪ್ರಾರಂಭಿಸಿವೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಡೆಪ್ಸಾಂಗ್ ಮೈದಾನ ಮತ್ತು ಡೆಮ್ಚೋಕ್ನಲ್ಲಿನ ತಾತ್ಕಾಲಿಕ ಶಿಬಿರಗಳನ್ನು ಕೆಡವುವ ಪ್ರಕ್ರಿಯೆ ಪೂರ್ಣಗೊಂಡಿದೆ ಮತ್ತು ಎರಡೂ ಕಡೆಯ ಅಂಥ ಎಲ್ಲಾ ಸ್ಥಳಗಳಲ್ಲಿ ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಭೌತಿಕವಾಗಿ ಮತ್ತು ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ಬಳಸಿ ಪರಿಶೀಲನೆ ಮಾಡಲಾಗುತ್ತಿದೆ.