ಗಯಾ: ಕಾಲಕ್ಕೆ ತಕ್ಕಂತೆ ಅಪರಾಧಗಳು ಸ್ವರೂಪ ಬದಲಾಗುತ್ತಿದೆ. ಇದೀಗ ದೇಶದೆಲ್ಲೆಡೆ 'ಡಿಜಿಟಲ್ ಅರೆಸ್ಟ್' ಎಂಬ ಸೈಬರ್ ವಂಚಕರ ಹೊಸ ಮೋಸದ ಜಾಲದ ಕುರಿತು ಸುದ್ದಿಯಾಗುತ್ತಿದ್ದು, ಜನರು ಈ ಬಗ್ಗೆ ಎಚ್ಚರವಹಿಸುವುದು ಅವಶ್ಯವಾಗಿದೆ. ಅಧಿಕಾರಿಗಳು ಎಂಬ ಸೋಗಿನಲ್ಲಿ ಕರೆ ಮಾಡುವ ವಂಚಕರು ಅಮಾಯಕರಿಂದ ಹಣ ದೋಚುತ್ತಿರುವ ಪ್ರಕರಣಗಳು ಎಲ್ಲೆಡೆ ವರದಿಯಾಗುತ್ತಿದೆ. ತಂತ್ರಜ್ಞಾನದ ಪ್ರಯೋಜನ ಪಡೆದುಕೊಂಡು ನಡೆಸುತ್ತಿರುವ ಈ ವಂಚನೆ ಜಾಲದಲ್ಲಿ ಸುಶಿಕ್ಷಿತರೇ ಬಲಿಪಶುಗಳಾಗುತ್ತಿದ್ದಾರೆ.
ಇದೀಗ ಅದೇ ರೀತಿಯ ಡಿಜಿಟಲ್ ಅರೆಸ್ಟ್ ಪ್ರಕರಣ ಬಿಹಾರದ ಗಯಾದಲ್ಲಿ ನಡೆದಿದ್ದು, ವೈದ್ಯರೊಬ್ಬರು 96 ಗಂಟೆಗಳ ಕಾಲ ಡಿಜಿಟಲ್ ಬಂಧನಕ್ಕೆ ಒಳಗಾಗುವ ಜೊತೆಗೆ ಬರೋಬ್ಬರಿ 4.4 ಕೋಟಿ ರೂ ಮೋಸಕ್ಕೆ ಒಳಗಾಗಿದ್ದಾರೆ.
ಏನಿದು ಘಟನೆ?: ಡಾ.ಎ ಎನ್ ರಾಯ್ ಎಂಬ ವೈದ್ಯರು ಇತ್ತೀಚಿಗೆ ವಿಡಿಯೋ ಕರೆಯೊಂದನ್ನು ಸ್ವೀಕರಿಸಿದ್ದಾರೆ. ಕರೆ ಮಾಡಿದವರು ತಮ್ಮನ್ನು ಸಿಬಿಐ ಅಧಿಕಾರಿಗಳ ರೀತಿ ಪ್ರತಿಬಿಂಬಿಸಿಕೊಂಡು, ನಂಬಿಸಿದ್ದಾರೆ. ಈ ವೇಳೆ ವೈದ್ಯರ ಬಳಿ ಅಪಾರ ಪ್ರಮಾಣದ ಸಂಪತ್ತು ಇದ್ದು, ನಿಮ್ಮ ಮೇಲೆ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆ. ಅಲ್ಲದೇ, ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳದಂತೆ ಇರಲು ಲಂಚದ ಬೇಡಿಕೆಯನ್ನು ಇಟ್ಟಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗುವ ಭೀತಿಯಲ್ಲಿ ಹೆದರಿ ಸಿಬಿಐ ಅಧಿಕಾರಿಗಳು ಎಂಬಂತೆ ಬಿಂಬಿಸಿಕೊಂಡ ಅಧಿಕಾರಿಗಳ ನಿರ್ದೇಶನದಂತೆ 4 ದಿನದಲ್ಲಿ 4.40 ಕೋಟಿ ರೂ ಹಣ ವರ್ಗಾವಣೆ ಮಾಡಿರುವುದಾಗಿ ತಿಳಿಸಿದ್ದಾರೆ.