ಸಂಬಲ್‌ಪುರ(ಒಡಿಶಾ):ಯುವತಿಯೊಬ್ಬಳು ತಾನು ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಲು ದೇವರ ಮೊರೆ ಹೋಗಿದ್ದಾಳೆ. ಹೌದು, ಯುವತಿ ತಾನು ಇಷ್ಟಪಟ್ಟ ಯುವಕನೊಂದಿಗೆ ನನ್ನ ವಿವಾಹ ನಡೆಯಬೇಕು ಎಂದು ಸಮಲೇಶ್ವರಿ ದೇವಿಯ ಕಾಣಿಕೆಯ ಹುಂಡಿಗೆ ಪತ್ರ ಹಾಕಿ ಪ್ರಾರ್ಥಿಸಿದ್ದಾಳೆ. ಪತ್ರವನ್ನು ಕೆಂಪು ಶಾಯಿಯಲ್ಲಿ ಬರೆಯಲಾಗಿದೆ. ಯುವತಿ ತನ್ನ ಪತ್ರದಲ್ಲಿ ನಾನು ಯುವಕನೊಬ್ಬನನ್ನು ಮನಸಾರೆ ಪ್ರೀತಿಸುತ್ತಿದ್ದೇನೆ, ಅವನೊಂದಿಗೆ ನನ್ನ ವಿವಾಹವಾಗಲಿ ಎಂದು ಆಶೀರ್ವಾದಿಸು ಎಂದು ಸಮಲೇಶ್ವರಿ ದೇವಿ ಬಳಿ ವಿನಂತಿಸಿದ್ದಾಳೆ.
ಪತ್ರದ ಕುರಿತು ಸಮಲೇಶ್ವರಿ ದೇವಸ್ಥಾನದ ಟ್ರಸ್ಟ್ ಬೋರ್ಡ್ ಅಧ್ಯಕ್ಷ ಸಂಜಯ್ ಬಾಬು ಮಾತನಾಡಿ, ಭಕ್ತರು ತಾವು ಸಮಲೇಶ್ವರಿ ತಾಯಿಯ ಮಕ್ಕಳು ಎಂದು ನಂಬಿದ್ದಾರೆ. ಹಾಗಾಗಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕೋರಿ ದೇವಿಯ ಮೊರೆ ಹೋಗುತ್ತಾರೆ. ತಮ್ಮ ಇಷ್ಟಾರ್ಥ ಸಿದ್ಧಿಸಲು ಭಕ್ತರು ಪತ್ರ ಬರೆಯುವ ಮೂಲಕ ತಾಯಿ ಸಮಲೇಶ್ವರಿಯನ್ನು ಪ್ರಾರ್ಥಿಸುತ್ತಾರೆ. ಇದು ಹೊಸದೇನಲ್ಲ, ನಾವು ಹುಂಡಿಯನ್ನು ತೆರೆದಾಗಲೆಲ್ಲಾ ಇಂತಹ ಸಾಕಷ್ಟು ಪತ್ರಗಳು ಸಿಗುತ್ತವೆ. ಭಕ್ತರು ಉತ್ತಮ ಆರೋಗ್ಯಕ್ಕಾಗಿ, ಮಕ್ಕಳಾಗಲಿ ಹಾಗೂ ಬೇಗ ಮದುವೆಯಾಗಲಿ ಎಂದು ಪ್ರಾರ್ಥಿಸಿ ಪತ್ರ ಬರೆಯುತ್ತಾರೆ ಎಂದರು.
ಸರ್ವಾಂಗ ಸುಂದರನನ್ನಾಗಿ ಮಾಡು ಎಂದು ದೇವರಿಗೆ ಪತ್ರ ಬರೆದಿದ್ದ ಯುವಕ(ಚಿಕ್ಕಮಗಳೂರು): ಕೆಲವು ತಿಂಗಳ ಹಿಂದೆ, ಯುವಕನೊಬ್ಬ ಕಳಸದ ಕಳಸೇಶ್ವರಿ ದೇವಿಗೆ ತನ್ನನ್ನು ನಿನ್ನಂತೆಯೇ ಸುಂದರನನ್ನಾಗಿ ಮಾಡು ಎಂದು ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಪತ್ರದಲ್ಲಿ "ತಾನು ಪ್ರಪಂಚದಲ್ಲಿಯೇ ಸರ್ವಾಂಗ ಸುಂದರನಾಗಬೇಕು. ನನ್ನ ಸೌಂದರ್ಯದ ಹೊಣೆ ನಿನ್ನ ಜವಾಬ್ದಾರಿ ಆಗಿದೆ. ನಾನು ಖ್ಯಾತ ನಟ ಹಾಗೂ ಮಾಡೆಲ್ ಆಗಬೇಕು ಎಂದು ಬರೆದಿದ್ದ. ದೇವಾಲಯದ ಹುಂಡಿ ಎಣಿಕೆ ಮಾಡುವ ಸಂದರ್ಭ ಪತ್ರ ಲಭ್ಯವಾಗಿತ್ತು. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ನಟ ಮತ್ತು ಮಾಡೆಲ್ ಮಾಡುವಂತೆ ದೇವರಲ್ಲಿ ಮನವಿ: ಶ್ರೀ ಗಿರಿಜಾ ದೇವಿಗೆ ನಾನು ಸರ್ವಾಂಗ ಸುಂದರಿಯಾದ ನಿಮ್ಮ ಆಶೀರ್ವಾದ ಬಯಸುತ್ತಿದ್ದೇನೆ. ನಾನು ಒಬ್ಬ ಉತ್ತಮ ನಟ ಮತ್ತು ಮಾಡೆಲ್ ಆಗಬೇಕೆಂದು ಇಚ್ಛೆ ವ್ಯಕ್ತಪಡಿಸುತ್ತೇನೆ. ಈ ಕನಸನ್ನು ನನಸು ಮಾಡುವ ಹೊಣೆ ನಿಮ್ಮದು. ನಿಮ್ಮಂತೆಯೇ ನಾನು ಕೂಡ ಸರ್ವಾಂಗ ಸುಂದರನಾಗಬೇಕು. ಈ ಪತ್ರದ ಮೂಲಕ ನಿಮ್ಮ ಆಶೀರ್ವಾದವನ್ನು ಆಶಿಸುತ್ತೇನೆ. ನನ್ನ ಸೌಂದರ್ಯದ ಹೊಣೆ ನಿಮ್ಮದು. ಪ್ರಪಂಚದಲ್ಲೇ ಸರ್ವಾಂಗ ಸುಂದರನೆಂದು ಪ್ರಖ್ಯಾತಿ ಪಡೆಯಬೇಕು. ಇದು ನಿಮ್ಮ ಭಕ್ತನ ಬೇಡಿಕೆ ಮತ್ತು ಪ್ರಾರ್ಥನೆ. ನನ್ನ ಹೊಣೆ ನಿಮ್ಮದು ಎಂದು ಬರೆದು ದೇವರ ಹುಂಡಿಗೆ ಹಾಕಿದ್ದ.