ನವದೆಹಲಿ: 78ನೇ ಸ್ವಾತಂತ್ರ್ಯೋತ್ಸವ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಸತತ 11ನೇ ಬಾರಿಗೆ ರಾಷ್ಟ್ರಧ್ವಜಾರೋಹಣ ಮಾಡಿದರು.
ಧ್ವಜಾರೋಹಣ ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, "2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವುದು ನನ್ನ ಕನಸು ಮಾತ್ರವಲ್ಲ, ದೇಶದ 140 ಕೋಟಿ ಜನರ ಸಂಕಲ್ಪವಾಗಿದೆ" ಎಂದು ಹೇಳಿದರು.
"'ವಿಕಸಿತ್ ಭಾರತ 2047' ಕೇವಲ ಪದಗಳಲ್ಲ. ಅದು 140 ಕೋಟಿ ಜನರ ಸಂಕಲ್ಪ ಹಾಗೂ ಕನಸುಗಳ ಪ್ರತಿಬಿಂಬವಾಗಿದೆ. ಸಂಪನ್ಮೂಲಗಳ ಸವಾಲುಗಳು ಮತ್ತು ಕೊರತೆಗಳು ಇರಬಹುದು. 140 ಕೋಟಿ ಜನರು ಒಗ್ಗೂಡಿದರೆ, ಮನಸ್ಸು ಮಾಡಿದರೆ 2047ರ ವೇಳೆಗೆ ಭಾರತ ಸುಲಭವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ" ಎಂದು ಹುರಿದುಂಬಿಸಿದರು.
"ಶತಮಾನಗಳಿಂದ ದೇಶವು ಗುಲಾಮಗಿರಿಯಲ್ಲಿ ಮುಳುಗಿತ್ತು. ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟ ಮಹನೀಯರಿದ್ದಾರೆ. ಪ್ರಾಣತ್ಯಾಗ ಮಾಡಿದ ಮಹನೀಯರಿಗೆ ದೇಶ ಋಣಿಯಾಗಿದೆ. ಅಂದು 40 ಕೋಟಿ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಇಂದು ನಾವು ದೇಶಕ್ಕಾಗಿ ಮತ್ತು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರಿಗೆ ವಂದಿಸುವ ಮಂಗಳಕರ ದಿನವಾಗಿದೆ." ಎಂದು ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಪ್ರಧಾನಿ ಮೋದಿ ಸ್ಮರಿಸಿದರು.
ನೈಸರ್ಗಿಕ ವಿಕೋಪಗಳ ಬಗ್ಗೆ ಪ್ರಧಾನಿ ಕಳವಳ: "ಈ ವರ್ಷ ಮತ್ತು ಕಳೆದ ಕೆಲವು ವರ್ಷಗಳಿಂದ, ನೈಸರ್ಗಿಕ ವಿಕೋಪದಿಂದಾಗಿ, ಹಲವಾರು ಜನರು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ, ಪ್ರಾಕೃತಿಕ ವಿಕೋಪದಲ್ಲಿ ಆಸ್ತಿಯನ್ನು ಕಳೆದುಕೊಂಡಿದ್ದಾರೆ. ದೇಶ ಕೂಡ ನಷ್ಟ ಅನುಭವಿಸಿವೆ. ನಾನು ಅವರೆಲ್ಲರಿಗೂ ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ದೇಶ ಅವರೊಂದಿಗೆ ನಿಲ್ಲುತ್ತದೆ ಎಂದು ನಾನು ಭರವಸೆ ನೀಡುತ್ತೇನೆ" ಎಂದ ಮೋದಿ ಇತ್ತೀಚಿನ ರಾಷ್ಟ್ರೀಯ ವಿಪತ್ತುಗಳಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸಿದರು.
ಸುಧಾರಣೆಗಳ ಬಗ್ಗೆ ಮಾತನಾಡಿದ ಮೋದಿ: "ನಮ್ಮ ಸರ್ಕಾರ ಹಲವಾರು ದೊಡ್ಡ ಸುಧಾರಣೆಗಳನ್ನು ತಂದಿದೆ. ಮಧ್ಯಮ ವರ್ಗ ಮತ್ತು ಬಡವರ ಜೀವನವನ್ನು ಬದಲಾಯಿಸುವ ಉದ್ದೇಶದಿಂದ ದೊಡ್ಡ ಸುಧಾರಣೆಗಳನ್ನು ಹೊರತರುವ ಮೂಲಕ ಯಥಾಸ್ಥಿತಿಯೊಂದಿಗೆ ಬದುಕುವ ಮನಸ್ಥಿತಿಯನ್ನು ಮುರಿಯಲು ತಮ್ಮ ಸರ್ಕಾರ ಕೆಲಸ ಮಾಡಿದೆ. ಅಭಿವೃದ್ಧಿಯ ನೀಲನಕ್ಷೆಯಾಗಿ ಸುಧಾರಣೆಗಳನ್ನು ತರುತ್ತಿದ್ದೇವೆ. ಇದು ಯಾವುದೇ ರಾಜಕೀಯ ಉದ್ದೇಶದಿಂದ ಮಾಡುವಂತಹದ್ದಲ್ಲ. ರಾಷ್ಟ್ರ ಮೊದಲು ಎಂಬ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದ್ದೇವೆ." ಎಂದರು.