ನವದೆಹಲಿ: ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ಸೂಚ್ಯಂಕ 400 ಅಂಕಗಳನ್ನು ದಾಟಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ. ಗಣರಾಜ್ಯೋತ್ಸವಕ್ಕೂ ಮುನ್ನಾದಿನ ದೆಹಲಿಯಲ್ಲಿ ತೀವ್ರ ಚಳಿ ಇದ್ದು, ದಟ್ಟ ಮಂಜು ಕವಿದ ವಾತಾವರಣ ಮುಂದುವರೆದಿದೆ. ಗುರುವಾರ ಬೆಳಿಗ್ಗೆ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ.
ಇಂಡಿಯಾ ಗೇಟ್, ಆನಂದ್ ವಿಹಾರ್ ಸೇರಿದಂತೆ ನಗರದ ಪ್ರಮುಖ ಪ್ರದೇಶದಲ್ಲಿ ದಟ್ಟವಾದ ಮಂಜಿನಿಂದ ಗೋಚರತೆ ಕ್ಷೀಣಿಸಿದೆ. ಅನೇಕ ರೈಲು, ವಿಮಾನಗಳ ಹಾರಾಟ ವಿಳಂಬವಾಗಿದೆ. ಈ ರೀತಿಯ ವಾತಾವರಣ ನಾಳೆಯೂ ಮುಂದುವರೆಯಲಿದ್ದು, 7 ಡಿಗ್ರಿ ಸೆಲ್ಸಿಯಸ್ ಹವಾಮಾನ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಟ್ಟ ಮಂಜಿನೊಂದಿಗೆ ಭಾರಿ ಚಳಿಯಿಂದ ಉತ್ತರದ ಹಲವು ರಾಜ್ಯಗಳು ತತ್ತರಿಸುತ್ತಿವೆ. ದೆಹಲಿಯಲ್ಲಿ 180 ವಸತಿರಹಿತರು ಸಾವನ್ನಪ್ಪಿದ್ದಾರೆ ಎಂದು ಆಮ್ ಆದ್ಮಿ ನೇತೃತ್ವದ ಸರ್ಕಾರ ಮಾಹಿತಿ ನೀಡಿದೆ.
ಸದ್ಯ ದೆಹಲಿಯ ವಾಯು ಗುಣಮಟ್ಟ ಗಂಭೀರ ಮಟ್ಟದಲ್ಲಿ ಕಳಪೆಯಾಗಿದ್ದು, ಗ್ಯಾಸ್ ಚೆಂಬರ್ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಇನ್ನೊಂದು ದಿನ ಪರಿಸ್ಥಿತಿ ವೀಕ್ಷಿಸಿ ಹಂತ 3ರ ಅಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್ (ಜಿಆರ್ಎಪಿ) ಎಂದು ಕರೆಯಲಾಗುವ ಕೇಂದ್ರದ ವಾಯು ಮಾಲಿನ್ಯ ನಿಯಂತ್ರಣ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇದರಿಂದ ಪರಿಸ್ಥಿತಿ ಸುಧಾರಿಸಬಹುದು ಹೇಳಲಾಗುತ್ತಿದೆ.