ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಟ್ಟ ಮಂಜು ಮುಸುಕಿದ ವಾತಾವರಣ ಮುಂದುವರೆದಿದ್ದು, ಶುಕ್ರವಾರ ಶೂನ್ಯ ವೀಕ್ಷಣಾ ಸಾಮರ್ಥ್ಯ ದಾಖಲಾಗಿದೆ. ಇದರ ಪರಿಣಾಮವಾಗಿ, ವಿಮಾನ ಹಾಗೂ ರೈಲು ಸಂಚಾರ ಬಂದ್ ಆಗಿದೆ. ಭಾರತೀಯ ಹವಾಮಾನ ಇಲಾಖೆ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ಹಲವೆಡೆ ಸಾಧಾರಣದಿಂದ ದಟ್ಟ ಮಂಜಿನ ವಾತಾವರಣ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಜಾಲತಾಣದ ಪ್ರಕಾರ, ದೆಹಲಿಯಲ್ಲಿ ಇಂದು ಬೆಳಗ್ಗೆ 6ಕ್ಕೆ ವಾಯು ಗುಣಮಟ್ಟ ಸೂಚ್ಯಂಕ 408 ದಾಖಲಾಗುವ ಮೂಲಕ ವಾಯುಮಾಲಿನ್ಯ ಕಳಪೆ ವರ್ಗದಲ್ಲಿದೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ವಿಮಾನ ಹಾರಾಟದ ಮೇಲೆ ಪರಿಣಾಮ ಬೀರಿದೆ.