ನವದೆಹಲಿ: ರಾಷ್ಟ್ರ ರಾಜಧಾನಿಯ ಹಲವು ಶಾಲೆಗಳಿಗೆ ಶನಿವಾರ ಕೂಡ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಒಂದೇ ವಾರದಲ್ಲಿ ಮೂರು ಬಾರಿ ಈ ರೀತಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿ. 8 ರಂದು 40 ಶಾಲೆ, ಡಿ. 13ರಂದು 30 ಮತ್ತು ಇಂದು (ಡಿ. 14) ಕೂಡ ಡಿಪಿಎಸ್ ಆರ್ಕೆ ಪುರಂ ಶಾಲೆಗಳಿಗೆ ಬೆದರಿಕೆ ಕರೆ ಬಂದಿವೆ. ಇಂದು ಬೆಳಗ್ಗೆ 6.09ಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಈ ಹಿನ್ನೆಲೆಯಲ್ಲಿ ಭದ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ನಡುವೆ ಬಾಂಬ್ ಬೆದರಿಕೆ ಸಂದೇಶ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಪಶ್ಚಿಮ ವಿಹಾರದಲ್ಲಿನ ಶಾಲೆಗೆ ಬಾಂಬ್ ಬೆದರಿಕೆ ಇಮೇಲ್ ಸಂದೇಶ ಕಳುಹಿಸಿದ್ದು, ಖಾಸಗಿ ಶಾಲೆ ವಿದ್ಯಾರ್ಥಿ ಎಂಬುದು ತನಿಖೆ ವೇಳೆ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಪೊಲೀಸರು, ಶಾಲಾ ವಿದ್ಯಾರ್ಥಿಯೊಬ್ಬ ತನ್ನ ಶಾಲೆಗೆ ಬಾಂಬ್ ಬೆದರಿಕೆ ಸಂದೇಶವನ್ನು ಇಮೇಲ್ ಮೂಲಕ ಕಳುಹಿಸಿದ್ದಾರೆ. ಐಪಿ ಅಡ್ರೆಸ್ ಮೂಲಕ ಆತ ಹಾಗೂ ಮನೆಯ ವಿಳಾಸವನ್ನು ತನಿಖಾ ತಂಡ ಪತ್ತೆ ಮಾಡಿದೆ. ಈ ಸಂಬಂಧ ವಿದ್ಯಾರ್ಥಿಯನ್ನು ಪ್ರಶ್ನಿಸಿದಾಗ, ಆತ ತಾನು ಸಂದೇಶ ಕಳುಹಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಆತನನ್ನು ಸಮಲೋಚನೆಗೆ ಒಳಪಡಿಸಲಾಗಿದೆ. ಆತನ ಪೋಷಕರಿಗೂ ಮಗನ ನಡುವಳಿಕೆ ಗಮನಿಸುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.