ನವದೆಹಲಿ:ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿನಲ್ಲೇ ಹತ್ಯೆ ಮಾಡುವ ಸಂಚು ನಡೆಯುತ್ತಿದೆ ಎಂದು ಆಮ್ ಆದ್ಮಿ ಪಕ್ಷ (ಆಪ್) ಗಂಭೀರ ಆರೋಪ ಮಾಡಿದೆ. ಮಧುಮೇಹದಿಂದ ಬಳಲುತ್ತಿರುವ ಅವರಿಗೆ ಇನ್ಸುಲಿನ್ ನೀಡಲಾಗುತ್ತಿಲ್ಲ. ಇದು ಅವರನ್ನು ಕೊಲ್ಲಲು ಮಾಡುತ್ತಿರುವ ತಂತ್ರ ಎಂದು ದೆಹಲಿ ಸಚಿವ ಸೌರಭ್ ಭಾರದ್ವಾಜ್ ದೂರಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್ ಅವರು ಕಳೆದ 22 ವರ್ಷಳಿಂದ ಮಧುಮೇಹಕ್ಕೆ ತುತ್ತಾಗಿದ್ದಾರೆ. 12 ವರ್ಷಗಳಿಂದ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಅವರ ಆರೋಗ್ಯ ಉತ್ತಮವಾಗಿದೆ. ಇನ್ಸುಲಿನ್ ಬೇಕಾಗಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ತಿಹಾರ್ ಜೈಲು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರ ಹಿಂದೆ ಏನೋ ರಹಸ್ಯ ಅಡಗಿದೆ ಎಂದು ಅವರು ಹೇಳಿದರು.
ತಿಹಾರ್ ಜೈಲಿನಲ್ಲಿ ವೈದ್ಯರು ಮತ್ತು ಇನ್ಸುಲಿನ್ ಲಭ್ಯತೆ ಇಲ್ಲವಾದಲ್ಲಿ, ಕೇಜ್ರಿವಾಲ್ ಅವರಿಗೆ ವಿಡಿಯೋ ಕಾಲ್ ಮೂಲಕ ಖಾಸಗಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ನೀಡಬೇಕು. ಬಿಜೆಪಿ ಮತ್ತು ತಿಹಾರ್ ಜೈಲಿನ ಅಧಿಕಾರಿಗಳು ಕೇಜ್ರಿವಾಲ್ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಅವರಿಗೆ ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ ಸೌಲಭ್ಯ ನೀಡುವುದಾಗಿ ಜೈಲು ಅಧಿಕಾರಿಗಳು ತಿಳಿಸಿದ್ದರು. ಇದೀಗ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಮಧುಮೇಹಕ್ಕೆ ಇನ್ಸುಲಿನ್ ನೀಡುವುದಾಗಿ ಹೇಳಿತ್ತು. ಇದೀಗ ದೆಹಲಿ ಗವರ್ನರ್ ಜನರಲ್ಗೆ ಪತ್ರ ಬರೆದು ಚುಚ್ಚುಮದ್ದು ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಏಮ್ಸ್ ಆಸ್ಪತ್ರೆಯಿಂದಲೂ ಪ್ರಮಾಣಪತ್ರ ಪಡೆದಿದ್ದಾರೆ. ಇದು ಅನುಮಾನ ಮೂಡಿಸುತ್ತಿದೆ ಎಂದು ಅವರು ಹೇಳಿದರು.