ನವದೆಹಲಿ:ದೆಹಲಿ ಮದ್ಯ ನೀತಿಯ ಅಡಿಯಲ್ಲಿ ಪಡೆದ ಪ್ರಯೋಜನಗಳಿಗೆ ಪ್ರತಿಯಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರಿಗೆ 100 ಕೋಟಿ ರೂಪಾಯಿ ಪಾವತಿಸುವುದರಲ್ಲಿ ಬಿಆರ್ಎಸ್ ವಿಧಾನ ಪರಿಷತ್ ಸದಸ್ಯೆ ಕೆ.ಕವಿತಾ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿದೆ. ಮಾರ್ಚ್ 15ರಂದು ಹೈದರಾಬಾದ್‌ನಲ್ಲಿ ಕವಿತಾರನ್ನು ಬಂಧಿಸಿರುವ ಇ.ಡಿ ಸೋಮವಾರ ಅಧಿಕೃತ ವಿವರಗಳನ್ನು ಬಿಡುಗಡೆ ಮಾಡಿತು.
ದೆಹಲಿ ಪಿಎಂಎಲ್‌ಎ ವಿಶೇಷ ನ್ಯಾಯಾಲಯವು, ಕವಿತಾ ಅವರನ್ನು ಹೆಚ್ಚಿನ ತನಿಖೆಗೆ ಒಳಪಡಿಸಲು ಮಾರ್ಚ್ 23ರವರೆಗೆ ಇ.ಡಿ ಕಸ್ಟಡಿಗೆ ಒಪ್ಪಿಸಿದೆ. ಮಾರ್ಚ್ 15ರಂದು ಹೈದರಾಬಾದ್‌ನಲ್ಲಿರುವ ಕವಿತಾ ನಿವಾಸದಲ್ಲಿ ತೀವ್ರ ಶೋಧ ನಡೆಸಲಾಗಿತ್ತು. ಈ ವೇಳೆ ಸಂಬಂಧಿಕರು ಮತ್ತು ಸಹೋದ್ಯೋಗಿಗಳು ಇಡಿ ಅಧಿಕಾರಿಗಳನ್ನು ತಡೆಯಲು ಪ್ರಯತ್ನಿಸಿದ್ದರು.
ನಿರಂತರವಾಗಿ ದೇಣಿಗೆ ಸ್ವೀಕರಿಸಿದ ಎಎಪಿ ನಾಯಕರು:ದೆಹಲಿ ಮದ್ಯ ನೀತಿಯ ರಚನೆ ಮತ್ತು ಅನುಷ್ಠಾನದಿಂದ ಪ್ರಯೋಜನಗಳನ್ನು ಪಡೆಯಲು ಕವಿತಾ ಅವರು ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರಂತಹ ಇತರ ಉನ್ನತ ಆಪ್ ನಾಯಕರೊಂದಿಗೆ ಹಗರಣದಲ್ಲಿ ಪಾಲ್ಗೊಂಡಿದ್ದರು. ಈ ಅನುಕೂಲಕ್ಕೆ ಪ್ರತಿಯಾಗಿ ಎಎಪಿ ನಾಯಕರಿಗೆ 100 ಕೋಟಿ ರೂ.ಗಳನ್ನು ಪಾವತಿಸುವುದರಲ್ಲಿ ಕವಿತಾ ಪಾಲುದಾರರಾಗಿದ್ದಳು. 2021-22ರಲ್ಲಿ ಮದ್ಯ ನೀತಿ ರಚನೆ ಮತ್ತು ಅನುಷ್ಠಾನ, ಭ್ರಷ್ಟಾಚಾರ ನಡೆದಿದೆ. ಸಗಟು ವ್ಯಾಪಾರಿಗಳಿಂದ ಎಎಪಿ ನಾಯಕರು ನಿರಂತರವಾಗಿ ದೇಣಿಗೆಗಳನ್ನು ಸ್ವೀಕರಿಸಿದ್ದಾರೆ. ಅದರ ನಂತರ, ಕವಿತಾ ಮತ್ತು ಅವರ ಬೆಂಬಲಿಗರು ಈ ವ್ಯವಹಾರದ ಮೂಲಕ ಲಾಭ ಮತ್ತು ಕ್ರಿಮಿನಲ್ ಗಳಿಕೆ ಪಡೆಯಲು ಎಎಪಿ ನಾಯಕರಿಗೆ ಪೂರ್ವ ಪಾವತಿಸಿದ ದೇಣಿಗೆಗಳನ್ನು ಪಡೆಯಲು ಸಂಚು ರೂಪಿಸಿದ್ದರು ಎಂದು ಇಡಿ ವಿವರಿಸಿದೆ.