ಕರ್ನಾಟಕ

karnataka

ETV Bharat / bharat

ತೆಲಂಗಾಣ ಮಾಜಿ ಸಿಎಂ ಪುತ್ರಿ ಕವಿತಾಗೆ ಮಧ್ಯಂತರ ಜಾಮೀನು ನಿರಾಕರಿಸಿದ ಕೋರ್ಟ್​, ಜೈಲೇ ಗತಿ - BRS leader Kavitha

ದೆಹಲಿ ಮದ್ಯ ನೀತಿ ಹಗರಣದ ಆರೋಪಿ ಕವಿತಾ ಅವರಿಗೆ ಮಧ್ಯಂತರ ಜಾಮೀನು ನೀಡಲು ಕೋರ್ಟ್​ ನಿರಾಕರಿಸಿದೆ.

ಕವಿತಾಗೆ ಮಧ್ಯಂತರ ಜಾಮೀನು ನಿರಾಕರಿಸಿದ ಕೋರ್ಟ್
ಕವಿತಾಗೆ ಮಧ್ಯಂತರ ಜಾಮೀನು ನಿರಾಕರಿಸಿದ ಕೋರ್ಟ್

By ANI

Published : Apr 8, 2024, 1:26 PM IST

ನವದೆಹಲಿ:ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂಎಲ್‌ಸಿ, ತೆಲಂಗಾಣ ಮಾಜಿ ಸಿಎಂ ಕೆಸಿಆರ್​ ಪುತ್ರಿ ಕೆ. ಕವಿತಾ ಅವರು ಕೋರಿದ್ದ ಮಧ್ಯಂತರ ಜಾಮೀನು ಸೋಮವಾರ ತಿರಸ್ಕೃತಗೊಂಡಿದೆ.

ರಾಷ್ಟ್ರ ರಾಜಧಾನಿಯಲ್ಲಿನ ರೋಸ್ ಅವೆನ್ಯೂ ನ್ಯಾಯಾಲಯ ಸೋಮವಾರ ಅರ್ಜಿಯನ್ನು ವಜಾ ಮಾಡಿದೆ. ತನ್ನ ಮಗನಿಗೆ ಶಾಲಾ ಪರೀಕ್ಷೆಗಳು ಆರಂಭವಾಗಿದ್ದು, ನೈತಿಕ ಬೆಂಬಲ ನೀಡುವ ಸಲುವಾಗಿ ತಮಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ಕೋರಿ ಕವಿತಾ ಅವರು ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಇಂದು ಬೆಳಗ್ಗೆ ಮಧ್ಯಂತರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಬಳಿಕ ಅದನ್ನು ವಜಾ ಮಾಡಿದರು.

ಜಾಮೀನಿಗೆ ಇಡಿ ವಿರೋಧ:ಬಿಆರ್‌ಎಸ್ ನಾಯಕಿಯ ಜಾಮೀನು ಅರ್ಜಿಗೆ ಇಡಿ ಪರ ವಕೀಲರು ತೀವ್ರ ಆಕ್ಷೇಪ್ರ ವ್ಯಕ್ತಪಡಿಸಿದರು. ಆರೋಪಿತೆಯಾಗಿರುವ ಕವಿತಾ ಅವರು ಫೋನ್‌ನಲ್ಲಿರುವ ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ. ಸಾಕ್ಷಿದಾರರ ಹೇಳಿಕೆಗಳನ್ನೂ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ, ಅವರಿಗೆ ಜಾಮೀನು ನೀಡಬಾರದು ಎಂದು ಇಡಿ ಅಧಿಕಾರಿಗಳು ವಾದಿಸಿದ್ದರು.

ಕವಿತಾ ಅವರು ಪ್ರಕರಣ ಕುರಿತು ಸಮನ್ಸ್ ನೀಡಿದ ದಿನದಂದು ತಮ್ಮ ಫೋನ್‌ನಿಂದ ಸಾಕ್ಷ್ಯವನ್ನು ಅಳಿಸಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಅವರು ಪ್ರಶ್ನೆಯಿಂದ ನುಣುಚಿಕೊಂಡರು. ಒಂಬತ್ತು ಮೊಬೈಲ್ ಫೋನ್‌ಗಳನ್ನು ಬಳಸುತ್ತಿದ್ದರು. ಎಲ್ಲದರಲ್ಲೂ ಮಾಹಿತಿಯನ್ನು ಡಿಲಿಟ್​ ಮಾಡಲಾಗಿದೆ. ಮಾರ್ಚ್ 14 ಮತ್ತು 15 ರಂದು ಅವರು ನಾಲ್ಕು ಮೊಬೈಲ್ ಫೋನ್‌ಗಳಿಂದ ಡೇಟಾವನ್ನು ಅಳಿಸಿದ್ದಾರೆ ಎಂದು ಇಡಿ ಹೇಳಿದೆ.

ಇದು ಮೊದಲ ಬಾರಿಗೆ ಅಲ್ಲ, 100 ಕ್ಕೂ ಹೆಚ್ಚು ಸಾಧನಗಳು ಕಣ್ಮರೆಯಾಗಿವೆ ಅಥವಾ ಅಳಿಸಿಹೋಗಿವೆ ಎಂದು ವಾದಿಸಿದರು. ಈ ಫೋನ್ ಹಸ್ತಾಂತರಿಸುವ ಮೊದಲು ಫಾರ್ಮ್ಯಾಟ್ ಮಾಡಲಾಗಿತ್ತು. ಇದು ಸಾಕ್ಷ್ಯ ನಾಶವನ್ನು ತೋರಿಸುತ್ತದೆ ಎಂದು ಇಡಿ ವಕೀಲರು ಕೋರ್ಟ್​ ಗಮನಕ್ಕೆ ತಂದರು. ಪ್ರಕರಣವು ಪ್ರಗತಿಯ ಹಂತದಲ್ಲಿದೆ. ಬಿಆರ್‌ಎಸ್ ನಾಯಕಿಗೆ ಮಧ್ಯಂತರ ಜಾಮೀನು ನೀಡಿದಲ್ಲಿ ತನಿಖೆಯ ಹಳಿತಪ್ಪಲಿದೆ. ಅವರು ತಮ್ಮ ಪ್ರಭಾವ ಬಳಸುವ ಸಾಧ್ಯತೆ ಇದೆ. ಹೀಗಾಗಿ ಜಾಮೀನು​ ನೀಡಬೇಡಿ ಎಂದು ಕೋರಿದರು.

ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್ ಅವರ ಪುತ್ರಿಯಾಗಿರುವ ಕವಿತಾ ಅವರ 'ಸೌತ್ ಗ್ರೂಪ್​' ಕಂಪನಿಯು ದೆಹಲಿಯ ಮದ್ಯ ನೀತಿ ಹಗರಣದಲ್ಲಿ ಪರವಾನಗಿಗೆ 100 ಕೋಟಿ ರೂಪಾಯಿ ಪಡೆದಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಅವರನ್ನು ಇಡಿ ಅಧಿಕಾರಿಗಳು ಮಾರ್ಚ್ 15 ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್​​ನಲ್ಲಿನ ಅವರ ನಿವಾಸದಲ್ಲಿ ಬಂಧಿಸಿತ್ತು. ಕಳೆದ ಮಂಗಳವಾರದಿಂದ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ:ಅಬಕಾರಿ ಕೇಸ್​: ಸಿಬಿಐ ವಿಚಾರಣೆ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಬಿಆರ್‌ಎಸ್ ನಾಯಕಿ ಕವಿತಾ - KAVITHA

ABOUT THE AUTHOR

...view details