ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಇಂದು ಸಿಬಿಐ ಅಧಿಕಾರಿಗಳು ಅಧಿಕೃತವಾಗಿ ಬಂಧಿಸಿದ್ದಾರೆ. ಇದಕ್ಕೂ ಮೊದಲು ಸೋಮವಾರದಂದು ತಿಹಾರ್ ಜೈಲಿನಲ್ಲೇ ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸಿದ್ದ ಸಿಬಿಐ ಅಧಿಕಾರಿಗಳು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದರು.
ಮಂಗಳವಾರವೂ ಮತ್ತೊಮ್ಮೆ ವಿಚಾರಣೆ ನಡೆಸಿದ್ದರು. ಬಳಿಕ ಬುಧವಾರ ವಿಚಾರಣಾ ನ್ಯಾಯಾಲಯಕ್ಕೆ ಕೇಜ್ರಿವಾಲ್ ಅವರನ್ನು ಹಾಜರು ಪಡಿಸಲು ಅನುಮತಿಯನ್ನು ಸಿಬಿಐ ಪಡೆದಿತ್ತು. ಇದೀಗ ನ್ಯಾಯಾಲಯಕ್ಕೆ ಹಾಜರು ಪಡಿಸಿ ಅಧಿಕೃತವಾಗಿ ಬಂಧಿಸಿದ್ದಾರೆ. ಮದ್ಯ ನೀತಿ ಪ್ರಕರಣದಲ್ಲಿ ಇಡಿ ಮಾರ್ಚ್ 21 ರಂದು ಕೇಜ್ರಿವಾಲ್ ಅವರನ್ನು ಅವರ ನಿವಾಸದಿಂದ ಬಂಧಿಸಿತ್ತು. ಏಪ್ರಿಲ್ 1 ರಂದು ತಿಹಾರ್‌ಗೆ ಕಳುಹಿಸಲಾಗಿತ್ತು.
ಇದಕ್ಕೂ ಮುನ್ನ ದೆಹಲಿ ಹೈಕೋರ್ಟ್ ಅರವಿಂದ್ ಕೇಜ್ರಿವಾಲ್ ಅವರಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನನ್ನು ತಡೆ ನೀಡಿ ಹೈಕೋರ್ಟ್ ಆದೇಶಿಸಿತ್ತು. ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರಿದ್ದ ಪೀಠವು ರೋಸ್ ಅವೆನ್ಯೂ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿ ಆದೇಶ ಮಾಡಿತ್ತು.