ಸಿಂಗರೌಲಿ(ಮಧ್ಯ ಪ್ರದೇಶ): ಐಪಿಎಸ್ ಅಧಿಕಾರಿಯಾಗಿ ಅಧಿಕಾರದ ದಂಡ ಹಿಡಿದು ಕರ್ತವ್ಯ ಆರಂಭಿಸಬೇಕಿದ್ದ ಯುವ ಅಧಿಕಾರಿಯೊಬ್ಬರು ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಪ್ರೊಬೇಷನರಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಹಾಸನ ಜಿಲ್ಲೆಗೆ ನಿಯೋಜನೆಗೊಂಡಿದ್ದ ಹರ್ಷವರ್ಧನ್ ಸಿಂಗ್ (26) ಭೀಕರ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.
ಭಾನುವಾರ ಮೈಸೂರು-ಹಾಸನ ರಸ್ತೆಯ ಕಿತ್ತಾನೆ ಗ್ರಾಮದ ಬಳಿ ಹರ್ಷವರ್ಧನ್ ಅವರಿದ್ದ ಬೊಲೇರೋ ಜೀಪ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಅಪಘಾತದಲ್ಲಿ ಹರ್ಷವರ್ಧನ್ ತಲೆಗೆ ತೀವ್ರ ಗಾಯವಾಗಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೃತಕ ಉಸಿರಾಟದಲ್ಲಿದ್ದ ಅವರು ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ.
ಮೈಸೂರು ಪೊಲೀಸ್ ತರಬೇತಿ ಕೇಂದ್ರದಲ್ಲಿ ನಾಲ್ಕು ವಾರಗಳ ಕಾಲ ತರಬೇತಿ ಪೂರ್ಣಗೊಳಿಸಿದ್ದ ಹರ್ಷವರ್ಧನ್, 6 ತಿಂಗಳು ಹಾಸನದಲ್ಲಿ ಡಿಸ್ಟ್ರಿಕ್ಟ್ ಪ್ರಾಕ್ಟಿಕಲ್ ಟ್ರೈನಿಂಗ್ ಪಡೆಯಬೇಕಿತ್ತು. ಆದ್ದರಿಂದ ಪ್ರೊಬೇಷನರಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಹಾಸನ ಜಿಲ್ಲೆಗೆ ನಿಯೋಜನೆಗೊಂಡಿದ್ದರು.
ಆಗಿದ್ದೇನು?:ನಿನ್ನೆ ಮೈಸೂರಿನ ಪೊಲೀಸ್ ಅಕಾಡೆಮಿಯಿಂದ ನಿರ್ಗಮಿಸಿ, ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎದುರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಹಾಸನಕ್ಕೆ ಆಗಮಿಸಬೇಕಿತ್ತು. ಹೀಗಾಗಿ ಹಾಸನದ ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಮಂಜೇಗೌಡ, ಹಾಸನ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಬೊಲೇರೋ ಜೀಪ್‌ನಲ್ಲಿ ಮೈಸೂರಿಗೆ ಹೋಗಿ ಹರ್ಷವರ್ಧನ್ ಅವರನ್ನು ಕರೆತರುತ್ತಿದ್ದರು. ಹೊಳೆನರಸೀಪುರ ಮಾರ್ಗವಾಗಿ ಅವರು ಹಾಸನ ತಲುಪಬೇಕಿತ್ತು.
ಆದರೆ, ಹಾಸನ ಗಡಿ 3 ಕಿಲೋ ಮೀಟರ್ ಇರುವಾಗಲೇ ಹೆದ್ದಾರಿಯ ಕಿತ್ತಾನೆ ಗಡಿ ಬಳಿ ಟೈಯರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿದ ಜೀಪ್ ಮೂರ್ನಾಲ್ಕು ಪಲ್ಟಿಯಾಗಿ ರಸ್ತೆ ಪಕ್ಕದ ಮನೆಗೆ ಡಿಕ್ಕಿ ಹೊಡೆದಿದೆ. ಚಾಲಕ ಮತ್ತು ಐಪಿಎಸ್ ಅಧಿಕಾರಿ ಗಂಭೀರವಾಗಿ ಗಾಯಗೊಂಡರು. ಚಾಲಕ ಮಂಜೇಗೌಡ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಹರ್ಷವರ್ಧನ್ ಕೊನೆಯುಸಿರೆಳೆದರು.
ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪಾಸ್: ಬಿಇ ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದ ಹರ್ಷವರ್ಧನ್ ಸಿಂಗ್ 2023ರಲ್ಲಿ ಮೊದಲ ಪ್ರಯತ್ನದಲ್ಲೇ 153 ರ್ಯಾಂಕ್ನೊಂದಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. 2023ನೇ ಸಾಲಿನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದರು. ಇವರ ತಂದೆ ಅಖಿಲೇಶ್ ಸಿಂಗ್ ಪ್ರಸ್ತುತ ಸಿಂಗರೌಲಿಯ ದೇವ್‌ಸರ್ ತೆಹಸಿಲ್‌ನಲ್ಲಿ ಎಸ್‌ಡಿಎಂ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಕಿರಿಯ ಸಹೋದರ ಯುಪಿಎಸ್‌ಸಿ ಪರೀಕ್ಷೆ ಸಿದ್ಧತೆ ನಡೆಸುತ್ತಿದ್ದಾರೆ. ಹರ್ಷವರ್ಧನ್ ಅಕಾಲಿಕ ಮರಣ ಇಡೀ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ವಾರಾಣಾಸಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.
ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ:"ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಅವರು ಅಪಘಾತದಲ್ಲಿ ನಿಧನರಾದ ವಿಷಯ ತಿಳಿದು ದುಃಖವಾಯಿತು. ಅಧಿಕಾರ ಸ್ವೀಕರಿಸಲು ತೆರಳುತ್ತಿದ್ದ ವೇಳೆ ಇಂಥದ್ದೊಂದು ದುರ್ಘಟನೆ ಜರುಗಿದೆ ಎನ್ನುವುದು ಬಹಳ ಬೇಸರದ ಸಂಗತಿ. ವರ್ಷಗಳ ಕಠಿಣ ಪರಿಶ್ರಮ ಫಲ ನೀಡುವ ಹೊತ್ತಲ್ಲಿ ಹೀಗಾಗಬಾರದಿತ್ತು. ಹರ್ಷವರ್ಧನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮೃತನ ಕುಟುಂಬಕ್ಕೆ ನನ್ನ ಸಂತಾಪಗಳು" ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಧ್ಯಪ್ರದೇಶ ಸಿಎಂ ಸಂತಾಪ:"ರಸ್ತೆ ಅಪಘಾತದಲ್ಲಿ ಕರ್ನಾಟಕ ಕೆಡರ್ನ ಐಪಿಎಸ್ ಅಧಿಕಾರಿ ಹರ್ಷವರ್ಧನ್ ನಿಧನ ದುರದೃಷ್ಟಕರ. ಯುವ ಅಧಿಕಾರಿಯ ಸಾವು ದೇಶಕ್ಕೆ ನಷ್ಟವನ್ನುಂಟು ಮಾಡಿದೆ. ಮೃತನ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಮಧ್ಯ ಪ್ರದೇಶ ಸಿಎಂ ಮೋಹನ್ ಯಾದವ್ ಎಕ್ಸ್ನಲ್ಲಿ ಪೋಸ್ಟ್ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:ಮರ್ಯಾದಾ ಹತ್ಯೆಗೆ ಮಹಿಳಾ ಕಾನ್ಸ್‌ಟೇಬಲ್ ಬಲಿ: ನಡುರಸ್ತೆಯಲ್ಲೇ ತಮ್ಮನಿಂದ ಕ್ರೌರ್ಯ