ಪುಣೆ: ಭಾನುವಾರ ಪುಣೆ ಜಿಲ್ಲೆಯ ಲೋನಾವಾಲಾದಲ್ಲಿ ಜಲಪಾತ ವೀಕ್ಷಣೆಗೆ ತೆರಳಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಒಂದೇ ಕುಟುಂಬದ ಐವರ ಪೈಕಿ ಮೂವರ ಶವ ದೊರೆತಿದೆ. ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಬಳಿಕ ನಿನ್ನೆ ತೀವ್ರ ಹುಡುಕಾಟ ನಡೆಸಿದ ರಕ್ಷಣಾ ತಂಡಗಳು ಶಾಹಿಸ್ತಾ ಲಿಯಾಕತ್ ಅನ್ಸಾರಿ (36), ಅಮಿಮಾ ಆದಿಲ್ ಅನ್ಸಾರಿ (13) ಮತ್ತು ಉಮೇರಾ ಆದಿಲ್ ಅನ್ಸಾರಿ (8) ಮೃತದೇಹಗಳನ್ನು ಹೊರತೆಗೆದಿದ್ದಾರೆ.
ನಾಪತ್ತೆಯಾಗಿರುವ ಇಬ್ಬರು ಮಕ್ಕಳಾದ ಅದ್ನಾನ್ ಸಭಾಹತ್ ಅನ್ಸಾರಿ (4) ಮತ್ತು ಮರಿಯಾ ಅಖಿಲ್ ಅನ್ಸಾರಿ (9)ಗಾಗಿ ಇಂದು ಶೋಧ ಕಾರ್ಯಾಚರಣೆ ಪುನರಾರಂಭಿಸಿದ್ದಾರೆ ಎಂದು ಲೋನಾವಾಲಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದರು.
ಪೊಲೀಸರ ಪ್ರಕಾರ, ಪುಣೆಯ ಹಡಪ್ಸರ್ ಪ್ರದೇಶದ ಸಯ್ಯದ್ ನಗರದ ಕುಟುಂಬವೊಂದರ ಒಟ್ಟು 17 ಸದಸ್ಯರು ಭಾನುವಾರ ಲೋನಾವಾಲಾ ಬಳಿಯ ಭೂಶಿ ಅಣೆಕಟ್ಟಿನ ಸಮೀಪವಿರುವ ಜಲಪಾತ ವೀಕ್ಷಿಸಲು ತೆರಳಿದ್ದರು. ನೀರು ಕಡಿಮೆ ಇದ್ದ ಕಾರಣ 10 ಜನ ಜಲಪಾತದ ಮಧ್ಯಭಾಗಕ್ಕೆ ಹೋಗಿದ್ದಾರೆ. ಈ ವೇಳೆ ಏಕಾಏಕಿ ಜೋರು ಮಳೆ ಪ್ರಾರಂಭವಾಗಿ ನೀರಿನ ಹರಿವು ಹೆಚ್ಚಾಗಿದೆ. ಇದರಿಂದಾಗಿ ಹೊರ ಬರಲಾಗದೇ 10 ಜನರು ನೀರಿನಲ್ಲಿ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ.
ಇದರಲ್ಲಿ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ 36 ವರ್ಷದ ಮಹಿಳೆ ಸೇರಿ ಇಬ್ಬರು ಮಕ್ಕಳ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ. ಉಳಿದ ಇಬ್ಬರು ಮಕ್ಕಳು ಇನ್ನೂ ಪತ್ತೆಯಾಗದ ಕಾರಣ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಸಾವಿರಾರು ಜನರು ಭೂಶಿ ಮತ್ತು ಪಾವನ ಅಣೆಕಟ್ಟು ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಕೆಲವರು ಇಂತಹ ಜಲಪಾತ ಪ್ರದೇಶಗಳಿಗೆ ಇಳಿಯುವ ಸಾಹಸ ಮಾಡುತ್ತಾರೆ. ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ಎಷ್ಟೇ ಎಚ್ಚರಿಕೆ ಫಲಕಗಳನ್ನು ಹಾಕಿದರೂ ಅದನ್ನು ನಿರ್ಲಕ್ಷಿಸುತ್ತಿದ್ದಾರೆ. ನಿನ್ನೆ ಒಂದೇ ದಿನ ಲೋಕವಾಲಾಗೆ 50,000ಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ:ಜಲಪಾತದಲ್ಲಿ ಕೊಚ್ಚಿಹೋದ ಮಹಿಳೆ, ನಾಲ್ವರು ಅಪ್ರಾಪ್ತ ಮಕ್ಕಳು - Five drown in waterfall