ಚೆನ್ನೈ: ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಕೃತ್ಯದ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಈ ಘಟನೆ ಖಂಡಿಸಿ, ಇದೀಗ ರಾಜ್ಯಪಾಲರಾದ ಆರ್ಎನ್ ರವಿ ಅವರಿಗೆ ಮನವಿ ಮಾಡಿರುವ ನಟ- ರಾಜಕಾರಣಿ ವಿಜಯ್ ಅವರು, ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಇಂದು ರಾಜಭವನದಲ್ಲಿ ಗವರ್ನರ್ ರವಿ ಅವರನ್ನು ಭೇಟಿಯಾದ ತಮಿಳಗಂ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ ವಿಜಯ್, ಈ ಕುರಿತು ಮನವಿ ಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವಿಚಾರವನ್ನು ರಾಜ್ಯಪಾಲರ ಅಂಗಳಕ್ಕೆ ಕೊಂಡೊಯ್ದಿರುವ ನಟ ವಿಜಯ್ ನಡೆಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಮಲೈ ಕೂಡ ಬೆಂಬಲ ನೀಡಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ರಕ್ಷಿಸುವ ಕುರಿತು ಪಕ್ಷದ ನಾಯಕರು ಬೇಡಿಕೆ ಇಟ್ಟಿದ್ದಾರೆ.
ನಮ್ಮ ಮನವಿ ಪತ್ರದಲ್ಲಿ ತಮಿಳುನಾಡಿನಲ್ಲಿ ರಕ್ಷಿಸಲು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗೇ ರಾಜ್ಯದ ಎಲ್ಲಾ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸಲು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂದು ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್ ಆನಂದ್ ತಿಳಿಸಿದರು.
ಇದೇ ವೇಳೆ ಪಕ್ಷವು ಫೆಂಜಲ್ ಚಂಡಮಾರುತಕ್ಕೆ ಕೇಂದ್ರದಿಂದ ಪರಿಹಾರ ಹಣ ಬಿಡುಗಡೆ ಮಾಡಲು ಮುಂದಾಗಬೇಕು ಎಂದು ಕೂಡ ಮನವಿ ಮಾಡಿದೆ. ಫೆಂಜಲ್ ಚಂಡಮಾರುತದಿಂದ ಹಾನಿಗೊಳಗಾದ ಜನರಿಗೆ ತಮಿಳುನಾಡು ಕೇಳಿದ ಪರಿಹಾರ ಹಣ ದೊರೆಕಿಲ್ಲ. ರಾಜ್ಯ ಸರ್ಕಾರ ಕೇಂದ್ರದಿಂದ 2,000 ಕೋಟಿ ಹಣ ಪರಿಹಾರ ಕೇಳಿದೆ. ರಾಜ್ಯಪಾಲರೊಂದಿಗಿನ ಸಭೆಯಲ್ಲಿ ವಿಜಯ್ ಜೊತೆ ಆನಂದ್ ಕೂಡ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಪಕ್ಷದ ಸಾಮಾಜಿಕ ಜಾಲತಾಣದಲ್ಲಿ ಕೂಡ ವಿಜಯ್ ಸಂತ್ರಸ್ತೆ ಉದ್ದೇಶಿಸಿ ಕೈ ಬರಹದ ಪತ್ರ ಬರೆದಿದ್ದರು. ಇದರಲ್ಲಿ ಪ್ರೀತಿಯ ಸಹೋದರಿ ಎಂದು ಸಂಭೋದಿಸಿದ್ದ ಅವರು, ''ನಮ್ಮನ್ನು ಆಳುವವರಿಗೆ ಎಷ್ಟು ಬಾರಿ ಕೇಳಿದರೂ ಪ್ರಯೋಜನವಿಲ್ಲ ಎಂದು ತಿಳಿದಿದೆ. ಅದಕ್ಕೆ ಈ ಪತ್ರ ಬರೆಯುತ್ತಿರುವುದಾಗಿ ತಿಳಿಸಿದ್ದರು. ಪ್ರತಿ ದಿನ ಮಹಿಳೆಯರು ಸಾಮೂಹಿಕ ಲೈಂಗಿಕ ದೌರ್ಜನ್ಯ, ಲೈಂಗಿಕ ಅಪರಾಧ ಮತ್ತು ಹಲವು ಕೃತ್ಯಗಳಿಗೆ ಬಲಿಯಾಗುತ್ತಿದ್ದಾರೆ. ಅವರು ಹೇಳಲಾಗದ ನೋವನ್ನು ನೋಡಿ ಅಣ್ಣಂದಿರು ಖಿನ್ನತೆಗೆ ಒಳಗಾಗುತ್ತಿದ್ದಾರೆ.
ಅಣ್ಣನಾಗಿ ನಾನು ನಿಮ್ಮ ಜೊತೆ ನಿಲ್ಲುತ್ತೇನೆ. ಯಾವುದರ ಬಗ್ಗೆಯೂ ಚಿಂತಿಸಬೇಡಿ. ನಿಮ್ಮ ಅಧ್ಯಯನದ ಮೇಲೆ ಕೇಂದ್ರೀಕರಿಸಿ. ನಾವು ಸುರಕ್ಷಿತ ತಮಿಳುನಾಡನ್ನು ರಚಿಸುತ್ತೇವೆ. ನಾವು ಅದನ್ನು ಶೀಘ್ರದಲ್ಲೇ ಖಚಿತಪಡಿಸುತ್ತೇವೆ'' ಎಂದು ಭರವಸೆ ನೀಡಿದ್ದರು.
ಇದನ್ನೂ ಓದಿ: ಅಣ್ಣಾ ವಿವಿ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ಓರ್ವ ಆರೋಪಿ ಬಂಧನ