ನವದೆಹಲಿ:ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ಅಧಿಕಾರಿ ದಂಪತಿ ಒಂದೇ ದಿನದ ಅಂತರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವುದೋ ಕಾರಣಕ್ಕಾಗಿ ವಾಯುಪಡೆಯ ಫ್ಲೈಟ್ ಲೆಫ್ಟಿನೆಂಟ್ ಆಗಿದ್ದ ಪತಿ ಸಾವಿನ ಸುದ್ದಿ ಕೇಳಿ, ಮರುದಿನವೇ ಸೇನಾ ಕ್ಯಾಪ್ಟನ್ ಆಗಿದ್ದ ಪತ್ನಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಾಯುಪಡೆಯಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿದ್ದ ದೀನದಯಾಳ್ ದೀಪ್ ಅವರು ಅಕ್ಟೋಬರ್ 14ರ ರಾತ್ರಿ ಆಗ್ರಾ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಅವರ ಪತ್ನಿ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿರುವ ರೇಣು ತನ್ವರ್ ಅವರಿಗೆ ಮಾಹಿತಿ ನೀಡಲಾಗಿತ್ತು. ಇದರಿಂದ ಆಘಾತಗೊಂಡ ಅವರು ಮರುದಿನ ಅಂದರೆ, ಅಕ್ಟೋಬರ್ 15ರಂದು ರಾತ್ರಿ ದೆಹಲಿಯ ನಿವಾಸದಲ್ಲಿ ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದಾರೆ.
ಏನಾಯ್ತು?:ಆಗ್ರಾ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿರುವ ದೀನದಯಾಳ್ ದೀಪ್(32) ಅವರು ರಾಜಸ್ಥಾನದ ಮೂಲದ ರೇಣು ತನ್ವರ್ ಅವರನ್ನು 2022ರಲ್ಲಿ ವಿವಾಹವಾಗಿದ್ದರು. ರೇಣು ಅವರು ಆಗ್ರಾದಲ್ಲಿ ಮಿಲಿಟರಿ ನರ್ಸಿಂಗ್ ಸರ್ವಿಸ್ (MNS)ನಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಸೇನಾ ದಂಪತಿ ಇಲ್ಲಿನ ವಾಯುಪಡೆಯ ಕ್ಯಾಂಪಸ್‌ನಲ್ಲಿ ವಾಸವಾಗಿದ್ದರು.
ಅಕ್ಟೋಬರ್ 14 (ಸೋಮವಾರ) ರಂದು ದೀನ್ದಯಾಳ್ ಅವರು ರಾತ್ರಿ ಊಟ ಮಾಡಿಕೊಂಡು ಮಲಗಲು ತೆರಳಿದ್ದರು. ಈ ವೇಳೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ಸಿಬ್ಬಂದಿ ಬಾಗಿಲು ತಟ್ಟಿದ್ದಾರೆ. ಪ್ರತಿಕ್ರಿಯಿಸದಿದ್ದಾಗ, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಾಗಿಲು ಮುರಿದು ನೋಡಿದಾಗ ದೀಪ್ ಅವರ ಮೃತದೇಹ ಪತ್ತೆಯಾಗಿತ್ತು. ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ.