ಕೋಲ್ಕತ್ತಾ(ಪಶ್ಚಿಮ ಬಂಗಾಳ): ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾನಗಳು ಸಾರ್ವಕಾಲಿಕವಾಗಿ ಕಡಿಮೆಯಾಗಲಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದೇ ವೇಳೆ, ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸುವ ರಾಹುಲ್ ಗಾಂಧಿ ನಿರ್ಧಾರವನ್ನೂ ಅವರು ಲೇವಡಿ ಮಾಡಿದರು. ಕೇರಳದ ವಯನಾಡ್‌ನಲ್ಲಿ ಸೋಲು ಅನುಭವಿಸುವ ಮುನ್ಸೂಚನೆ ಸಿಕ್ಕಿದೆ, ಹೀಗಾಗಿ ರಾಯ್ ಬರೇಲಿಗೆ ಬಂದಿದ್ದಾರೆ ಎಂದರು.
ಪಶ್ಚಿಮ ಬಂಗಾಳದ ಬರ್ಧಮಾನ್-ದುರ್ಗಾಪುರ ಮತ್ತು ಕೃಷ್ಣನಗರ ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಿದರು.
''ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪರಿಶಿಷ್ಟ ಜಾತಿ, ದಲಿತರು ಮತ್ತು ಒಬಿಸಿಗಳಿಗೆ ಮೀಸಲಾದ ಕೋಟಾಗಳನ್ನು ಕಿತ್ತು ತನ್ನ ಪಕ್ಷದ ತುಷ್ಟೀಕರಣ ರಾಜಕೀಯಕ್ಕಾಗಿ ವೋಟ್ ಬ್ಯಾಂಕ್ ಜಿಹಾದಿಗಳಿಗೆ ನೀಡಲಿದೆ'' ಎಂದು ಹೇಳಿದರು.
"ನಾನು ಸಂಸತ್ತಿನಲ್ಲಿ ಅವರ (ಕಾಂಗ್ರೆಸ್) ಸೋಲಿನ ಬಗ್ಗೆ ಬಹಳ ಹಿಂದೆಯೇ ಮಾತನಾಡಿದ್ದೆ. ಈಗ ಇದಕ್ಕೆ ಒಪಿನಿಯನ್ ಪೋಲ್ಸ್ ಅಥವಾ ಎಕ್ಸಿಟ್ ಪೋಲ್ಗಳ ಅಗತ್ಯವಿಲ್ಲ. ಅವರ ಹಿರಿಯ ನಾಯಕಿ (ಸೋನಿಯಾ ಗಾಂಧಿ) ತಮ್ಮ ಲೋಕಸಭೆ ಸ್ಥಾನ ತೊರೆದು ರಾಜಸ್ಥಾನದಿಂದ ರಾಜ್ಯಸಭೆಯ ಮೂಲಕ ಸಂಸತ್ತು ಪ್ರವೇಶಿಸಿದಾಗಲೇ ಸೋಲು ಸ್ಪಷ್ಟವಾಗಿತ್ತು. ಅಮೇಠಿ ಕ್ಷೇತ್ರದಿಂದ ಸೋತ ನಂತರ ವಯನಾಡ್‌ಗೆ ಹೋಗಿದ್ದ ಕಾಂಗ್ರೆಸ್‌ನ ಶೆಹಜಾದಾ (ರಾಹುಲ್ ಗಾಂಧಿ) ಈಗ ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ವಯನಾಡ್‌ನಲ್ಲಿ ಸೋಲುವುದು ಅವರಿಗೆ ಗೊತ್ತಿದೆ'' ಎಂದು ಕುಟುಕಿದರು.
ಮುಂದುವರೆದು, ''ವಯನಾಡ್‌ನಲ್ಲಿ ಮತದಾನದ ನಂತರ ಆ ಕ್ಷೇತ್ರದಲ್ಲಿ ರಾಜಕುಮಾರ (ರಾಹುಲ್ ಗಾಂಧಿ) ಸೋಲಿನ ಭಯದಿಂದ ಬೇರೆ ಸ್ಥಾನವನ್ನು ಹುಡುಕುತ್ತಾರೆ ಎಂದು ನಾನು ಮೊದಲೇ ಹೇಳಿದ್ದೆ. ಈಗ ಅವರು ಅಮೇಠಿಯಿಂದ ಓಡಿಹೋಗಿ ರಾಯ್ ಬರೇಲಿ ಕ್ಷೇತ್ರವನ್ನು ಆರಿಸಿಕೊಂಡಿದ್ದಾರೆ. ತಮ್ಮ ಸಂಚಾರದ ಸಮಯದಲ್ಲಿ ಅವರು (ರಾಹುಲ್) ಜನರಿಗೆ 'ಡರೋ ಮತ್' (ಹೆದರಬೇಡಿ) ಎಂದು ಹೇಳುತ್ತಾರೆ. ನಾನು ಅವರಿಗೆ ಅದೇ ವಿಷಯವನ್ನು ಹೇಳುತ್ತೇನೆ. 'ಡರೋ ಮತ್, ಭಾಗೋ ಮತ್' (ಹೆದರಬೇಡಿ, ಓಡಿಹೋಗಬೇಡಿ)'' ಎಂದು ಮೋದಿ ವ್ಯಂಗ್ಯವಾಡಿದರು.
"ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಲೆಕ್ಕ ಸಾರ್ವಕಾಲಿಕ ಕಡಿಮೆಯಾಗಲಿದೆ. ಕಾಂಗ್ರೆಸ್ ಎಷ್ಟು ಬೇಕಾದರೂ ಪ್ರಯತ್ನಿಸಲಿ. ಆದರೆ, ಪಕ್ಷವು ಈ ಬಾರಿ ಅರ್ಧಶತಕವನ್ನು ದಾಟಲು ಸಾಧ್ಯವಾಗುವುದಿಲ್ಲ. ಅವರು 50 ಸ್ಥಾನಗಳನ್ನಾದರೂ ಪಡೆಯಬೇಕೆಂದು ಕಷ್ಟಪಡುತ್ತಿದ್ದಾರೆ. ಅಲ್ಲದೇ, 15 ಸ್ಥಾನಗಳ ಗೆಲ್ಲುವ ಟಿಎಂಸಿ, 50ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯುವ ಕಾಂಗ್ರೆಸ್ ಅಥವಾ ತನ್ನ ಬೆಂಬಲವನ್ನು ಕಳೆದುಕೊಂಡಿರುವ ಎಡರಂಗವು ಚುನಾವಣೆಯಲ್ಲಿ ಗೆದ್ದು ಸ್ಥಿರ ಸರ್ಕಾರವನ್ನು ರಚಿಸಬಹುದೇ?, ಇದಕ್ಕೆ ಉತ್ತರ ಇಲ್ಲ. ಬಿಜೆಪಿ ನೇತೃತ್ವದ ಎನ್‌ಡಿಎ ಮಾತ್ರ ಚುನಾವಣೆಯಲ್ಲಿ ಗೆದ್ದು ಸ್ಥಿರ ಸರ್ಕಾರ ರಚಿಸಲಿದೆ'' ಎಂದು ಹೇಳಿದರು.
''ಭಾರತ ಸರ್ಕಾರವು ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ನೀಡಬಾರದು ಎಂದು ನಮ್ಮ ಸಂವಿಧಾನವು ಸ್ಪಷ್ಟವಾಗಿ ಹೇಳುತ್ತದೆ. ಅವರು (ಕಾಂಗ್ರೆಸ್) ಮೋದಿಯನ್ನು ಬೆಂಬಲಿಸಿದ ಕಾರಣ ಒಬಿಸಿಗಳು, ದಲಿತರು ಮತ್ತು ಬುಡಕಟ್ಟು ಜನಾಂಗದವರ ಮೇಲೆ ಕೋಪಗೊಂಡಿದ್ದಾರೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿಯನ್ನು ಕಸಿದುಕೊಂಡು ಧರ್ಮದ ಆಧಾರದ ಮೇಲೆ ಅವರ ಮತ ಬ್ಯಾಂಕ್‌ಗೆ ಮೀಸಲಾತಿ ನೀಡುವುದಿಲ್ಲ ಎಂದು ಕಾಂಗ್ರೆಸ್ ಮತ್ತು ಅದರ 'ಇಂಡಿಯಾ' ಮೈತ್ರಿಕೂಟ ಲಿಖಿತ ಹೇಳಿಕೆ ನೀಡಬೇಕು'' ಎಂದು ಮೋದಿ ಒತ್ತಾಯಿಸಿದರು.
ಇದನ್ನೂ ಓದಿ:ಕೈಸರ್‌ಗಂಜ್‌ನಲ್ಲಿ ಬ್ರಿಜ್ಭೂಷಣ್ ಸಿಂಗ್ ಪುತ್ರ, ರಾಯ್‌ಬರೇಲಿಯಲ್ಲಿ ದಿನೇಶ್ ಪ್ರತಾಪ್ ಸಿಂಗ್‌ಗೆ ಬಿಜೆಪಿ ಟಿಕೆಟ್