ಭುವನೇಶ್ವರ: ಡಾನಾ ಚಂಡಮಾರುತದಿಂದ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆಯಾಗುತ್ತಿದೆ. ವೇಗದ ಗಾಳಿಯೊಂದಿಗೆ ಬರುತ್ತಿರುವ ಮಳೆಯಿಂದಾಗಿ ಎರಡು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮರಗಳು ಉರುಳಿದ್ದು, ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿದೆ. ಇದರಿಂದ ಅನೇಕ ಮೂಲ ಸೌಕರ್ಯಗಳು ಹಾನಿಯಾಗಿದೆ.
ಒಡಿಶಾದಲ್ಲಿ ಹೆಚ್ಚಿನ ಹಾನಿ ಸಂಭವಿಸದಿದ್ದರೂ ಪಶ್ಚಿಮ ಬಂಗಾಳದಲ್ಲಿ ಚಂಡ ಮಾರುತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಚಂಡಮಾರುತದಿಂದ ವಾಯುಭಾರ ಕುಸಿದಿದ್ದು, ಗಾಳಿಯು ಪಶ್ಚಿಮಕ್ಕೆ ಹೆಚ್ಚು ಚಲಿಸುತ್ತಿದೆ. ಈ ಹಾನಿಗೊಳಗಾದ ಪ್ರದೇಶದಲ್ಲಿ ಅಧಿಕಾರಿಗಳು ಪರಿಹಾರ ಕ್ರಮವನ್ನು ಯುದ್ದೋಪಾದಿಯಲ್ಲಿ ನಡೆಸಿದ್ದಾರೆ.
ಚಂಡಮಾರುತವೂ ಸಾಗಿದ ಬೆನ್ನಲ್ಲೇ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ತಕ್ಷಣಕ್ಕೆ ರೈಲು ಮತ್ತು ವಿಮಾನ ವ್ಯವಸ್ಥೆ ಕಾರ್ಯಾಚರಣೆ ಪುನರಾರಂಭಿಸಲಾಗಿದೆ. ಚಂಡಮಾರುತದ ಹಾನಿ ಪರಿಣಾಮ ಕುರಿತು ಅಧಿಕಾರಿಗಳು ತಕ್ಷಣಕ್ಕೆ ಕಾರ್ಯ ಪ್ರವೃತ್ತರಾದರು. ಚಂಡ ಮಾರುತವೂ ಧಮ್ರಾ ಮತ್ತು ಭಿತರ್ಕಾನಿಕಾ ನಡುವೆ ಭೂಕುಸಿತಕ್ಕೆ ಕಾರಣವಾಗಿದೆ.
ಹಾನಿಯ ಮೌಲ್ಯಮಾಪನ ಆರಂಭ:ಚಂಡಮಾರುತದ ಹಾನಿ ಮೌಲ್ಯಮಾಪನ ಕಾರ್ಯ ಶನಿವಾರದಿಂದ ಆರಂಭಿಸಲಾಗಿದ್ದು, ಇದು ಪೂರ್ಣಗೊಳ್ಳಲು ಏಳು ದಿನ ಬೇಕಾಗಲಿದೆ. ಸಂಚಾರ ಮಾರ್ಗದಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸಲಾಗಿದ್ದು, ಸಂಪರ್ಕ ಮಾರ್ಗವನ್ನು ಪುನರ್ ಸ್ಥಾಪಿಸಲಾಗಿದೆ ಎಂದು ಒಡಿಶಾ ಕಂದಾಯ ಸಚಿವ ಸುರೇಶ್ ಪೂಜಾರಿ ತಿಳಿಸಿದ್ದಾರೆ.
ಚಂಡಮಾರುತದಿಂದ ಮನೆ ಕಳೆದುಕೊಂಡವರಿಗೆ ಪಕ್ಕಾ ಮನೆಯನ್ನು ಕಲ್ಪಿಸಲಾಗುವುದು. ಚಂಡ ಮಾರುತದ ಹಿನ್ನೆಲೆ 6 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದರು. ಶೇ 95ರಷ್ಟು ಹಾನಿಗೆ ಒಳಗಾಗಿದ್ದ 33 ಕೆಜಿ ಫೀಡರ್ ಅನ್ನು ಈಗಾಗಲೇ ಮರು ಸ್ಥಾಪಿಸಲಾಗಿದ್ದು, ಶೀಘ್ರದಲ್ಲೇ ಅದು ಕಾರ್ಯ ನಿರ್ವಹಿಸಲಿದೆ ಎಂದು ಇಂಧನ ಇಲಾಖೆಯ ಉಸ್ತಿವಾರಿ ಸಿಂಗ್ ಡಿಯೋ ತಿಳಿಸಿದರು.
ಒಡಿಶಾದ ಜಂಬೂ, ತಲಚುವಾ, ಕಂಡಿರಾ ಮತ್ತು ಬಾಗಪಾಟಿಯಂತಹ ಪ್ರತ್ಯೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದ್ದು, ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಾಸ ಉಂಟಾಗಿದೆ. ಇದರ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದರು.
ಒಡಿಶಾದ ಕರಾವಳಿ ಚಂಡಮಾರುತದ ಗಾಳಿ, ಮಳೆಗೆ ಹೆಚ್ಚು ಹಾನಿಯಾಗಿದೆ. ಕೇಂದ್ರಪಾರಾ, ಭದ್ರಕ್ ಮತ್ತು ಬಾಲಸೋರ್‌ನಲ್ಲಿ ಗಾಳಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಸಾಗಿದ್ದು, ಸಮುದ್ರ ಎರಡು ಮೀಟರ್ ಎತ್ತರ ಕಂಡಿದೆ. ಘಟನೆ ಪರಿಶೀಲನೆ ನಡೆಸಿ ಮಾತನಾಡಿರುವ ಒಡಿಶಾ ಸಿಎಂ ಮೋಹನ್ ಚರಣ್ ಮಂಜಿ, ಎಲ್ಲರ ಸಹಕಾರದಿಂದ ಶೂನ್ಯ ಅಪಾಯದ ಮಿಷನ್ ಅನ್ನು ನಾವು ಸಾಧಿಸಿದ್ದು, ಯಾವುದೇ ಸಾವು ಅಥವಾ ಗಾಯದ ಪ್ರಕರಣ ದಾಖಲಾಗಿಲ್ಲ ಎಂದರು.
ಪಶ್ಚಿಮ ಬಂಗಾಳದಲ್ಲಿ ಇಬ್ಬರು ಬಲಿ:ಇನ್ನು ಪಶ್ಚಿಮ ಬಂಗಾಳದಲ್ಲಿ ಡಾನಾ ಚಂಡಮಾರುತಕ್ಕೆ ಓರ್ವ ಬಲಿಯಾಗಿರುವುದಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ದೃಢಪಡಿಸಿದರು. ರಾಜ್ಯದಲ್ಲಿ 2.16 ಲಕ್ಷ ಜನರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ ಎಂದರು.
ದಕ್ಷಿಣ 24 ಪರಗಣದ ಪಥರ್‌ಪ್ರತಿಮಾ ಬ್ಲಾಕ್‌ನ ನಿವಾಸಿ ಮನೆಯಲ್ಲಿ ಕೇಬಲ್ ಕೆಲಸ ಮಾಡುತ್ತಿರುವಾಗ ಸಾವನ್ನಪ್ಪಿರುವ ವರದಿಯಾಗಿದೆ. ಆತನ ಮರಣೋತ್ತರ ಪರೀಕ್ಷೆ ವರದಿ ಬರಬೇಕಿದೆ. ಅಗತ್ಯವಿದ್ದಲ್ಲಿ ಆತನ ಕುಟುಂಬಕ್ಕೆ ರಾಜ್ಯ ಸರ್ಕಾರ ಸಹಾಯ ಮಾಡಲಿದೆ ಎಂದು ತಿಳಿಸಿದ್ದಾರೆ.
ತಡರಾತ್ರಿಯಲ್ಲಿ ವಿದ್ಯುತ್ ಹರಿದ ಪರಿಣಾಮ ಕೊಲ್ಕತ್ತಾದಲ್ಲಿ 20 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಆತನ್ನು 24 ವರ್ಷ ಸೌರವ್ ಗುಪ್ತಾ ಎಂದು ಗುರುತಿಸಲಾಗಿದೆ. ರಾಜ್ಯದ ಕರಾವಳಿ ತೀರವಾದ ಪುರ್ಬ ಮೆದಿನಿಪುರ ಮತ್ತು ದಕ್ಷಿಣ ಪರಗಣ ಹೆಚ್ಚು ಹಾನಿಗೊಳಗಾಗಿವೆ. ಗಂಗಾಸಾಗರದ ಕಪಿಲ್ ಮುನಿ ದೇವಸ್ಥಾನ ಹಾಗೂ ಅನೇಕ ಕಚ್ಛಾ ಮನೆಗಳು ಹಾನಿಗೆ ಒಳಗಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಾನಾ ಚಂಡಮಾರುತದಿಂದ ಭತ್ತದ ಬೆಳೆಗಳು ಹೆಚ್ಚಿನ ನಷ್ಟಕ್ಕೆ ಒಳಗಾಗಿದೆ. ಪಶ್ಚಿಮ್ ಮೆದಿನಿಪುರ್ ಮತ್ತು ಇತರ ಕಡೆಗಳಲ್ಲಿ ಪ್ರವಾಹದಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೋಲ್ಕತ್ತಾದ ಕೆಲವು ಪ್ರದೇಶಗಳು ಕೂಡ ಭಾರಿ ಮಳೆಯಿಂದ ಪ್ರವಾಹಕ್ಕೆ ಒಳಗಾಗಿದೆ.
ಶನಿವಾರ ಕೂಡ ಭದ್ರಕ್, ಬಾಲ್ಸೊರ್, ಕೆನೊಜ್ಗರ್ ಮತ್ತು ಮಯುರಬಂಜ್ ಜಿಲ್ಲೆಯಲ್ಲಿ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ಇದನ್ನೂ ಓದಿ: ಡಾನಾ ಚಂಡಮಾರುತದ ಅಬ್ಬರದ ನಡುವೆ ನಿರಾಶ್ರಿತ ಕೇಂದ್ರದಲ್ಲಿನ 1,600 ಗರ್ಭಿಣಿಯರಿಗೆ ಹೆರಿಗೆ