ಕರ್ನಾಟಕ

karnataka

ETV Bharat / bharat

ದಾಖಲೆ ಪ್ರಮಾಣದಲ್ಲಿ ಹೆಚ್ಚುತ್ತಿವೆ ಸೈಬರ್​ ವಂಚನೆ ಪ್ರಕರಣ; ಇದರಿಂದ ತಪ್ಪಿಸಿಕೊಳ್ಳಲು ಜನರು ಏನ್ ಮಾಡಬೇಕು​? - CYBER FRAUD CASES - CYBER FRAUD CASES

ಕೇರಳದಲ್ಲಿ ಕಳೆದ ವರ್ಷ ಸೈಬರ್​ ವಂಚನೆ ಮೂಲಕ​ ಮೂಲಕ 201 ಕೋಟಿ ಮತ್ತು ಕಳೆದೆರಡು ತಿಂಗಳಲ್ಲಿ 98 ಕೋಟಿ ಹಣ ದೋಚಲಾಗಿದೆ.

Cyber fraud cases Raising in Kerala
Cyber fraud cases Raising in Kerala

By ETV Bharat Karnataka Team

Published : Mar 26, 2024, 4:51 PM IST

ಕೊಚ್ಚಿ: ಕೇರಳದಲ್ಲಿ ಸೈಬರ್​ ಹಣಕಾಸು ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, 2023ರಲ್ಲಿ ಈ ಸಂಬಂಧ 23,753 ದೂರುಗಳನ್ನು ಸ್ವೀಕರಿಸಲಾಗಿದೆ. ಅದರಲ್ಲೂ ಕಳೆದೆರಡು ತಿಂಗಳಲ್ಲಿ ಅಂದರೆ, 2024ರ ಜನವರಿ ಮತ್ತು ಫೆಬ್ರವರಿಯಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಪೊಲೀಸರಿಗೆ ಆತಂಕ​ ಮೂಡಿಸಿದೆ.

ಈ ಸಂಬಂಧ ಈಟಿವಿ ಭಾರತ್​​ ಜೊತೆ ಮಾತನಾಡಿರುವ ಸೈಬರ್​​​​​ ಕಾರ್ಯಾಚರಣೆಯ ಎಸ್​ಪಿ ಹರಿಶಂಕರ್​​, ಕಳೆದೆರಡು ತಿಂಗಳಲ್ಲಿ ರಾಜ್ಯದಲ್ಲಿ ಒಟ್ಟು 6700 ಪ್ರಕರಣಗಳು ದಾಖಲಾಗಿವೆ. ಈ ಮೂಲಕ 98 ಕೋಟಿ ರೂ. ವಂಚಿಸಲಾಗಿದೆ. ಪ್ರಕರಣದ ತನಿಖೆ ವೇಳೆ 15 ಕೋಟಿಯಷ್ಟು ಹಿಂಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಡೇಟಾವೂ ಕೇವಲ ವರದಿಯಾದ ಮತ್ತು ದೂರ ಪಡೆದ ಪ್ರಕರಣಗಳ ಮಾಹಿತಿಯನ್ನಷ್ಟೇ ಹೊಂದಿದೆ. ಆದರೆ, ಹಣ ಕಳೆದುಕೊಂಡ ಸಾವಿರಾರು ಮಂದಿ ಪ್ರಕರಣವನ್ನೇ ದಾಖಲಿಸಿಲ್ಲ ಎಂಬುದು ತನಿಖೆಯಲ್ಲಿ ಕಂಡುಬಂದಿದೆ.

ಕಳೆದ ವರ್ಷ ಆನ್​ಲೈನ್​ ಮೂಲಕ 201 ಕೋಟಿ ಮತ್ತು ಕಳೆದೆರಡು ತಿಂಗಳಲ್ಲಿ 98 ಕೋಟಿ ಹಣ ವಂಚನೆಯಾಗಿರುವುದು ಗೊತ್ತಾಗಿದೆ. ಸೈಬರ್​ ವಂಚನೆ ತನಿಖೆಗಾಗಿ ಕಳೆದ ವರ್ಷ 5107 ಬ್ಯಾಂಕ್​ ಖಾತೆ ಹಾಗೂ 3289 ಮೊಬೈಲ್​ ನಂಬರ್​ ಅನ್ನು ಬ್ಲಾಕ್​ ಮಾಡಲಾಗಿದೆ. ಇದರಲ್ಲಿ ಕೇವಲ ಶೇ 20ರಷ್ಟನ್ನು ಮಾತ್ರ ಹಿಂಪಡೆಯಲಾಗಿದೆ.

ದೇಶದಲ್ಲಿ ಇದೀಗ ಚುನಾವಣೆಗೆ ಸಜ್ಜಾಗಿದ್ದು, ವಂಚಕರು ಕೂಡ ಹಣ ಸುಲಿಗೆಗೆ ವಿವಿಧ ತಂತ್ರ ಬಳಕೆ ಮಾಡುವ ಮೂಲಕ ಕ್ರಿಯಾಶೀಲರಾಗಿದ್ದಾರೆ. ಚುನಾವಣಾ ಸೀಸನ್​ಗಾಗಿಯೇ ಅವರು ಹೊಸ ವಿಧಾನಗಳನ್ನು​ ವಿನ್ಯಾಸ ಮಾಡಿ ವಂಚಿಸಲು ಸಜ್ಜಾಗಿದ್ದಾರೆ. ಅದರಲ್ಲಿ ಒಂದು ಎಲೆಕ್ಷನ್​ ರಿಚಾರ್ಜ್​ ಯೋಜನೆ ಆಗಿದೆ. ಈ ಹೆಸರಿನಲ್ಲಿ ಗ್ರಾಹಕರ ಖಾತೆಗೆ ಹಣವನ್ನು ಠೇವಣಿ ಮಾಡುವಂತೆ ಪ್ರಚೋದಿಸುತ್ತಾರೆ.

ಸರ್ಕಾರಿ ಉದ್ಯೋಗಿಗಳೇ ಟಾರ್ಗೆಟ್​​: ಕೆಲವು ರಾಜಕೀಯ ಪಕ್ಷಗಳ ಹೆಸರು ಬಳಕೆ ಮಾಡಿ, ವಂಚಕರು ಗ್ರಾಹಕರಿಗೆ ಆಫರ್​ ನೀಡುತ್ತಿದ್ದಾರೆ. ಈ ಮಾದರಿಯಲ್ಲಿ ಅವರು ಜನರ ವೈಯಕ್ತಿಕ ಖಾತೆಗಳಿಗೆ ದೊಡ್ಡ ಮೊತ್ತದ ಹಣವನ್ನು ಠೇವಣಿ ಮಾಡುವ ಆಫರ್​ ನೀಡುತ್ತಾರೆ. ಈ ಮೂಲಕ ಅವರ ನಂಬಿಕೆ ಗಳಿಸಿ ವಂಚಕರು ಜನರ ಖಾತೆಗೆ ಸಣ್ಣ ಪ್ರಮಾಣದ ಹಣವನ್ನು ಠೇವಣಿ ಮಾಡುತ್ತಾರೆ. ಈ ವೇಳೆ ಬ್ಯಾಂಕ್​ ಖಾತೆಯಿಂದ ಹಣ ಲಪಟಾಯಿಸಲು ಲಿಂಕ್ ಅನ್ನು​ ನೀಡುತ್ತಾರೆ. ಅಷ್ಟೇ ಅಲ್ಲದೆ, ಇದರ ದೃಢೀಕರಣಕ್ಕಾಗಿ ಒಟಿಪಿಯನ್ನು ಸಹ ಕಳಿಸುತ್ತಾರೆ. ಈ ವೇಳೆ ಎಲ್ಲಾ ಮಾಹಿತಿಯನ್ನು ಪಡೆದು ಮೋಸ ಮಾಡುತ್ತಾರೆ. ಸರ್ಕಾರಿ ಉದ್ಯೋಗಿಗಳನ್ನು ಗುರಿಯಾಗಿಸಿ ವಂಚಕರು ಈ ತಂತ್ರವನ್ನು ಬಳಕೆ ಮಾಡುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳ ಸ್ಮಾರ್ಟ್‌ಫೋನ್‌ಗಳ ಮಾಹಿತಿ ಪಡೆಯಲು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವ ನೆಪದಲ್ಲಿ ಲಿಂಕ್ ಅನ್ನು ನೀಡುತ್ತಾರೆ. ಅವರು ಆ ಲಿಂಕ್​ಅನ್ನು ಕ್ಲಿಕ್ ಮಾಡಿದಾಗ ಅವರ ಫೋನ್​ನಲ್ಲಿ ಸೇವ್​ ಆಗಿರುವ ಎಲ್ಲಾ ಪಾಸ್‌ವರ್ಡ್‌ಗಳನ್ನು ಪಡೆಯುತ್ತಾರೆ.

ಟೆಲಿಗ್ರಾಂ ವಂಚನೆ ಹೆಚ್ಚಳ: ಬಹುತೇಕ ಸಂತ್ರಸ್ತರು ಸಾಮಾಜಿಕ ಮಾಧ್ಯಮ ಟೆಲಿಗ್ರಾಂ ಮೂಲಕವೇ ಹಣ ಕಳೆದುಕೊಂಡಿದ್ದಾರೆ. ಟ್ರೇಡಿಂಗ್​ನಲ್ಲಿ ಹಣ ಹೂಡಿಕೆ ಮಾಡಿ ದುಪ್ಪಟ್ಟು ಮಾಡಿಕೊಡುವ ಭರವಸೆಯನ್ನು ವಂಚಕರು ನೀಡುತ್ತಾರೆ. ಇಂದು ನೀವು 5 ಸಾವಿರ ಹಣ ಠೇವಣಿ ಮಾಡಿದರೆ, ಮರುದಿನ ಅದು ಆರು ಸಾವಿರ ಆಗಿರುತ್ತದೆ. ಹಣ ಪ್ರತಿದಿನ ಹೆಚ್ಚುತ್ತಿದೆ ಎಂದು ಗ್ರಾಹಕರಿಗೆ ಸಂದೇಶ ನೀಡುವ ಮೂಲಕ ಅವರನ್ನು ಆಕರ್ಷಿಸಿ, ದೊಡ್ಡ ಮೊತ್ತದ ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸುತ್ತಾರೆ. ಕ್ರಮೇಣ ವಂಚಕರು ನಯಾ ಪೈಸೆ ಬಿಡದಂತೆ ಎಲ್ಲ ಹಣವನ್ನು ದೋಚುತ್ತಾರೆ. ತನಿಖಾಧಿಕಾರಿಗಳು ಹೇಳುವಂತೆ ಈ ರೀತಿ ವಂಚನೆ ಮಾಡುವವರು ಹೆಚ್ಚು ಶಿಕ್ಷಣ ಪಡೆದವರಾಗಿದ್ದಾರೆ.

ಎಐ ಬಳಸಿ ವಂಚನೆ: ಅಷ್ಟೇ ಅಲ್ಲದೇ ಕೃತಕ ಬುದ್ಧಿಮತ್ತೆ (ಎಐ) ಬಳಕೆ ಮಾಡಿ ಮತ್ತೊಂದು ಹಂತದಲ್ಲಿ ಕೂಡ ಸೈಬರ್​ ವಂಚನೆ ಮಾಡಲಾಗುತ್ತಿದೆ. ಈ ಗುಂಪಿನ ಗುರಿ ದೊಡ್ಡ ಪ್ರಮಾಣದ ಕಾಲೇಜ್​ ವಿದ್ಯಾರ್ಥಿಗಳಾಗಿದ್ದಾರೆ. ಮನರಂಜನೆ ಮತ್ತು ಇತರೆ ಮೋಜು ಮಸ್ತಿಗೆ ಹಣ ಇಲ್ಲದವರನ್ನು ಗುರಿಯಾಗಿಸಿ ಸೈಬರ್​ ವಂಚನೆ ಮಾಡಲಾಗುತ್ತಿದೆ. ಈ ವಂಚನೆಯನ್ನು ಬ್ಯಾಂಕ್​ ಖಾತೆ ಮಾಹಿತಿ ಪಡೆದು ಮಾಡಲಾಗುತ್ತಿದೆ. ಇದರಲ್ಲಿ ಉತ್ತರ ಭಾರತದ ಕೆಲವರು ಹೆಚ್ಚಾಗಿ ಇಂತಹ ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ ಪೊಲೀಸ್​ ಅಧಿಕಾರಿಗಳು.

ಚುನಾವಣೆ ಸಮಯದಲ್ಲಿ ಪೊಲೀಸರು ಕೂಡ ಕರ್ತವ್ಯದ ಹಿನ್ನೆಲೆ ಬೇರೆ ಬೇರೆ ಸ್ಥಳಗಳಿಗೆ ತೆರಳಿರುತ್ತಾರೆ. ಇದರಿಂದ ಹೆಚ್ಚಿನ ಮಂದಿ ದೂರುಗಳನ್ನು ದಾಖಲಿಸಲು ಕೂಡ ಹಿಂಜರಿಯುತ್ತಾರೆ. ಸೈಬರ್​ ಘಟಕದ ಮೂಲಕ ಅಥವಾ ಠಾಣೆಯಲ್ಲಿ ಉಸ್ತುವಾರಿ ಹೊಂದಿರುವ ಇನ್ಸ್​ಪೆಕ್ಟರ್​​ಗಳಿಗೆ ದೂರು ತಲುಪಿದಾಗ ಮಾತ್ರ ಪ್ರಕರಣಗಳ ಪ್ರಕ್ರಿಯೆ ನಡೆಯುತ್ತದೆ. ಆದರೆ, ಇದೀಗ ಠಾಣೆಯಲ್ಲಿನ ಪಿಆರ್​ಒ, ಸ್ಟೇಷನ್​ ಇನ್​ ಚಾರ್ಜ್​ ಮುಂತಾದವರು ಹಲವು ಪ್ರಶ್ನೆಗಳ ಬಳಿಕ ದೂರುದಾರರನ್ನು ವಾಪಸ್​ ಕಳುಹಿಸುತ್ತಾರೆ. ಇದರ ಪರಿಣಾಮವಾಗಿ ದೂರು ದಾಖಲೀಕರಣ ಕೂಡ ವಿಳಂಬ ಆಗುತ್ತದೆ.

ಗೋಲ್ಡನ್​ ಅವರ್​ನಲ್ಲಿ ದೂರು ದಾಖಲಿಸಿ: ಹಣ ಕಳೆದುಕೊಂಡ ಎರಡು ಗಂಟೆಯೊಳಗೆ 1930 ಸೈಬರ್​​ ಹೆಲ್ಪ್​ಲೈನ್​ಗೆ ಕರೆ ಮಾಡಿ ದೂರು ನೀಡಿದಲ್ಲಿ, ಹಣ ಹಿಂಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ಜನರು ಹಣ ಕಳೆದುಕೊಂಡು 10 ದಿನಗಳ ಬಳಿಕ ಪೊಲೀಸರಿಗೆ ದೂರು ನೀಡುತ್ತಾರೆ. ಇದರಿಂದ ವಂಚಕರು ಹಣವನ್ನು ವಿತ್​​ಡ್ರಾ ಮಾಡಲು ಸಮಯ ಸಿಗುತ್ತದೆ.

ಯಾವುದೇ ಹಣವನ್ನು ಠೇವಣಿ ಮಾಡುವ ಮುನ್ನ ಜನರು ಆರ್​ಬಿಐನ ವೆಬ್​ ಸೈಟ್​ ಚೆಕ್​ ಮಾಡಿ, ಆ ಸಂಸ್ಥೆಯ ವಿಶ್ವಾಸಾರ್ಹತೆ ಕುರಿತು ಅರಿತು ಹೂಡಿಕೆ ಮಾಡುವುದು ಅಗತ್ಯ. ಇದರಿಂದ ವಂಚನೆ ತಪ್ಪಿಸಬಹುದು ಎಂದು ಪೊಲೀಸ್​ ಅಧಿಕಾರಿಗಳು ಸಲಹೆ ನೀಡುತ್ತಾರೆ. ದೇಶದಲ್ಲಿ ಸೈಬರ್​​ ಪ್ರಕರಣ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. 2021ರಲ್ಲಿ 4.52 ಲಕ್ಷ ಪ್ರಕರಣ, 2022ರಲ್ಲಿ 9.66 ಲಕ್ಷ, 2023ರಲ್ಲಿ 15.56 ಲಕ್ಷ ಪ್ರಕರಣ ದಾಖಲಾಗಿದೆ. ಸೈಬರ್​ ವಂಚನೆಯಲ್ಲಿ ಅರ್ಧದಷ್ಟು ಹಣಕಾಸು ವಂಚನೆಯದ್ದಾಗಿರುತ್ತದೆ.

ಇದನ್ನೂ ಓದಿ: ಜನರೇ ಎಚ್ಚರ.. ವಂಚಿಸಲೆಂದೇ 27 ವಿವಿಧ ವೇದಿಕೆಗಳನ್ನು ಬಳಸುತ್ತಿರುವ ಸೈಬರ್ ಕ್ರಿಮಿನಲ್‌ಗಳು: ಉದ್ಯೋಗದ ಹೆಸರಲ್ಲೇ ಹೆಚ್ಚು ಮೋಸ

ABOUT THE AUTHOR

...view details