ಜೋರ್ಹತ್(ಅಸ್ಸಾಂ): ಹಾನಿಕಾರಕ ಕೀಟಗಳು ಚಹಾ ಕೃಷಿಗೆ ಭಾರೀ ಪ್ರಮಾಣದಲ್ಲಿ ಕಂಟಕವಾಗಿ ಕಾಡುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಅಸ್ಸಾಂ ವಿಜ್ಞಾನಿಗಳು ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ. ಇದೊಂದು ರೀತಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಸಂಶೋಧನೆಯಾಗಿದ್ದು, ಭಾಗಶಃ ಯಶಸ್ಸು ಸಿಕ್ಕಿದೆ.
ಸ್ಥಳೀಯ ಮಾಂಸಹಾರಿಯಾದ ಮತ್ತು ಕೃಷಿಗೆ ಯೋಗ್ಯವಾದ ರೆಡುವಿಡ್ ಬಗ್ಸ್-ಅಸಾಸಿನ್ ಬಗ್ಸ್ ಎಂಬ ಎರಡು ಬಗೆಯ ಕೀಟಗಳನ್ನು ಸಂತಾನೋತ್ಪತ್ತಿ ಮಾಡುವ ಮೂಲಕ ಚಹಾ ತೋಟಗಳಲ್ಲಿ ಹಾನಿಕಾರಕ ಕೀಟಗಳ ಹಾವಳಿಗಳ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಇದೊಂದು ಹೊಸ ಪ್ರಯೋಗವಾಗಿದ್ದು ಪ್ರಾಯೋಗಿಕವಾಗಿ ಆ ಎರಡೂ ಕೀಟಗಳನ್ನು ಚಹಾ ತೋಟಗಳಲ್ಲಿ ಬಿಟ್ಟು ಈಗಾಗಲೇ ಯಶಸ್ಸು ಕಂಡಿದ್ದಾರೆ. ಈ ಪ್ರಯೋಗದ ಮಾದರಿಯನ್ನು ರಾಜ್ಯಾದ್ಯಂತ ವಿಸ್ತರಿಸುವುದು ಅವರ ಮುಂದಿನ ಗುರಿಯಾಗಿದೆ.
ಇತ್ತೀಚೆಗೆ ಚಹಾ ತೋಟಗಳಿಗೆ ಹಾನಿ ಉಂಟುಮಾಡುವ ಹಾನಿಕಾರಕ ಕೀಟಗಳ ಸಂಖ್ಯೆ ಶರವೇಗದಲ್ಲಿ ಬೆಳೆಯುತ್ತಿದ್ದರಿಂದ ಇವುಗಳ ನಿಯಂತ್ರಣ ವಿಜ್ಞಾನಿಗಳಿಗೆ ಸವಾಲಾಗಿತ್ತು. ಚಹಾ ಉತ್ಪಾದನೆಯ ಗುಣಮಟ್ಟದಲ್ಲಿ ಸತತ ಕುಸಿತ ಕಾಣುತ್ತಿತ್ತು. ಸಾವಯವ ಪದ್ಧತಿ ರೂಪದಲ್ಲಿ ಚಹಾ ಕೃಷಿಯ ಇಳುವರಿ ಹೆಚ್ಚಿಸುವುವುದು ಸೇರಿದಂತೆ ಹಾನಿಕಾರಕ ಕೀಟಗಳ ದಮನಕ್ಕೆ ಒಂದು ಮದ್ದು ಕಂಡುಕೊಳ್ಳುವುದು ಅನಿವಾರ್ಯವಾಗಿತ್ತು.
ಅಂತಿಮವಾಗಿ, ಅಸ್ಸಾಂ ಮತ್ತು ಭಾರತೀಯ ಚಹಾ ಜಾಗತಿಕ ಮಾರುಕಟ್ಟೆ ಸವಾಲು ಎದುರಿಸುತ್ತಿರುವುದನ್ನು ಮನಗಂಡ 'ಅಸ್ಸಾಂ ಟೊಕ್ಲೈ ಟೀ ರಿಸರ್ಚ್ ಇನ್‌ಸ್ಟಿಟ್ಯೂಟ್' (ಟಿಟಿಆರ್‌ಐ) ಈ ವಿನೂತನ ಪ್ರಯೋಗಕ್ಕೆ ಮುಂದೆ ಬರಬೇಕಾಯಿತು. ಹಾನಿಕಾರಕ ಕೀಟಗಳ ನಿಯಂತ್ರಣಕ್ಕೆ ಕೀಟನಾಶಕಗಳೇ ಬೇಕಿಲ್ಲ. ಅದನ್ನು ಹೆಚ್ಚೆಚ್ಚು ಬಳಸುವುದರಿಂದ ಜೀವವೈವಿಧ್ಯಕ್ಕೂ ಗಂಭೀರ ಅಪಾಯವ ಉಂಟುಮಾಡಬಲ್ಲದು. ಇದಕ್ಕಾಗಿ ಸಾವಯವ ಚಹಾ ಉತ್ಪಾದನೆ, ಚಹಾ ರೋಗಗಳಿಗೆ ಸಾವಯವ ಚಿಕಿತ್ಸೆ, ಕೀಟ ನಿಯಂತ್ರಣ ನಮ್ಮ ಮುಂದಿನ ಗುರಿ ಎಂದರಿತ ಜೋರ್ಹತ್‌ನ ಟೊಕ್ಲೈ ಟೀ ರಿಸರ್ಚ್ ಇನ್‌ಸ್ಟಿಟ್ಯೂಟ್ ಈ ವಿನೂತನ ಸಂಶೋಧನೆಗೆ ಮುಂದಾಯಿತು. ಇದು ರಾಸಾಯನಿಕ ಕೀಟನಾಶಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿ ಹೊಂದಿದ್ದು, ಹೆಚ್ಚು ಪರಿಸರಸ್ನೇಹಿ ಮತ್ತು ಸಾವಯವ ಚಹಾ ಕೃಷಿಗೆ ಯೋಗ್ಯ ಎನ್ನುವುದು ಗಮನಾರ್ಹ.
ಸಂಶೋಧನಾ ಸಂಸ್ಥೆಯ ಸಾಧನೆ: ಇತ್ತೀಚೆಗೆ ಟೊಕ್ಲೈ ಟೀ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ಎರಡು ವರ್ಷಗಳ ಅಧ್ಯಯನ ಮತ್ತು ಸಂಶೋಧನೆಯ ಭಾಗವಾಗಿ ಎರಡು ಪ್ರಯೋಜನಕಾರಿ (ರೆಡುವಿಡ್ ಬಗ್ಸ್-ಅಸಾಸಿನ್ ಬಗ್ಸ್) ಕೀಟಗಳನ್ನು ಗುರುತಿಸಿದ್ದಾರೆ. ಪ್ರಯೋಗಾಲಯದಲ್ಲಿ ಅದರ ಸಂತಾನೋತ್ಪತ್ತಿ ಮತ್ತು ಪ್ರಾಯೋಗಿಕ ಕೆಲಸ ಮಾಡಲು ಮತ್ತು ಕೀಟ ನಿಯಂತ್ರಣದಲ್ಲಿ ಪರಿಣಾಮಕಾರಿ ಫಲಿತಾಂಶ ಪಡೆಯಲು ಯಶ ಕೂಡ ಕಂಡಿದ್ದಾರೆ. ಸಂತಾನೋತ್ಪತ್ತಿ ಮಾಡಲಾದ ಕೀಟಗಳನ್ನು ಈಗಾಗಲೇ ಹಲವು ಚಹಾ ತೋಟಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಇವು ಹಾನಿಕಾರಕ ಕೀಟಗಳನ್ನು ತಿನ್ನುವ ಮೂಲಕ ಅವುಗಳ ನಿಯಂತ್ರಣಕ್ಕೆ ಮುಂದಾಗಿವೆ ಎನ್ನುವುದು ವಿಶೇಷ.
ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಮೃದುಲ್ ಶರ್ಮಾ, "ಚಹಾ ಕೃಷಿಯಲ್ಲಿ ವಿವಿಧ ರೀತಿಯ ಕೀಟ ಸಮಸ್ಯೆಗಳಿದ್ದು, ಅವುಗಳ ನಿಯಂತ್ರಣಕ್ಕೆ ನಾವು ಸಾಕಷ್ಟು ಪ್ರಯತ್ನ ಮಾಡತ್ತಲೇ ಬಂದಿದ್ದೇವೆ. ಕೃಷಿಯಲ್ಲಿ ಕೀಟನಾಶಕಗಳ ಬಳಕೆಯ ಬಗ್ಗೆ ನಮಗೆಲ್ಲರಿಗೂ ಗೊತ್ತಿರುವುದೇ. ಹಾನಿಕಾರಕ ಕೀಟಗಳ ನಿಯಂತ್ರಣವನ್ನು ಸಾವಯವವಾಗಿ ಹೇಗೆ ಮಾಡಬಹುದು ಎಂಬುದರ ಕುರಿತು ಸದ್ಯ ನಾವು ಸಂಶೋಧನೆ ನಡೆಸುತ್ತಿದ್ದೇವೆ. ಅದರಲ್ಲಿ ಪ್ರಾಯೋಗಿಕವಾಗಿ ಸಕ್ಸಸ್ ಸಹ ಕಂಡಿದ್ದೇವೆ. ಇತರ ಹಾನಿಕಾರಕ ಕೀಟಗಳನ್ನು ತಿನ್ನುವ ಉಪಯುಕ್ತ ಕೀಟಗಳ ಮೇಲೆ ಸಂಶೋಧನೆ ಮತ್ತು ಸಂತಾನೋತ್ಪತ್ತಿ ಮಾಡುತ್ತಿರುವುದು ವಿಶೇಷ. ಈ ಕೀಟವನ್ನು ಚಹಾ ತೋಟದಲ್ಲಿ ಈಗಾಗಲೇ ಬಿಡುಗಡೆ ಮಾಡಿದ್ದು, ಅವುಗಳ ಚಲನವಲನವನ್ನು ಗಮನಿಸಿದ್ದೇವೆ. ಅಸಾಸಿನ್ ಬಗ್ ಎಂದು ಕೆರೆಯುವ ಈ ಕೀಟಗಳು ಟೀ ಗಿಡಗಳಲ್ಲಿನ ಕೀಟಗಳನ್ನು ಅಥವಾ ಲೂಪರ್, ರೆಡ್ ಸ್ಲಗ್, ಹೆಲೋಪೆಲ್ಟಿಸ್, ಟರ್ಮೈಟ್ ಮುಂತಾದ ಇತರ ಸಸ್ಯಗಳನ್ನು ತಿನ್ನುವ ಮೂಲಕ ಕೀಟಗಳನ್ನು ನಿಯಂತ್ರಿಸಬಲ್ಲದು. ಈ ಕೀಟವನ್ನು ನಮ್ಮ ಪ್ರಯೋಗಾಲಯದಲ್ಲಿಯೇ ಅಭಿವೃದ್ಧಿಪಡಿಸಿದ್ದು, ಒಂದೇ ದಿನದಲ್ಲಿ ಸುಮಾರು 40-50 ಕೀಟಗಳನ್ನು ತಿನ್ನುವ ಮೂಲಕ ಕೃಷಿಗೆ ಸಹಕಾರಿ" ಎಂದರು.
"ಈ ಕೀಟವು ಬೆಳವಣಿಗೆಯಾದಾಗ ಪ್ರಯೋಗಾಲಯದಲ್ಲಿ ಐದು ಪದರಗಳ ಮೂಲಕ ಹಾದುಹೋಗುತ್ತದೆ. ಅದರ ಜೀವನ ಚಕ್ರವು ಋತುಮಾನಕ್ಕೆ ಅನುಗುಣವಾಗಿ ಬದಲಾಗುತ್ತದೆ. ಚಳಿಗಾಲದಲ್ಲಿ ಇದು ಮೊಟ್ಟೆಯಿಂದ ಬೆಳವಣಿಗೆಯಾಗಲು ಸಾಮಾನ್ಯವಾಗಿ 45-55 ದಿನಗಳನ್ನು ತೆಗೆದುಕೊಳ್ಳುತ್ತದೆ. ಬೇಸಿಗೆಯಲ್ಲಿ ಈ ಪ್ರಕ್ರಿಯೆ 34-40 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಹಾನಿಕಾರಕ ಕೀಟ ಇದ್ದಲ್ಲಿಯೇ ತೆರಳಿ ಬೇಟೆ ಆಡುತ್ತದೆ. ಜೈವಿಕವಾಗಿ ನಿಯಂತ್ರಿಸಬಹುದಾದ ಧನಾತ್ಮಕ ಫಲಿತಾಂಶಗಳೂ ಇವೆ. ಚಹಾ ಮಾತ್ರವಲ್ಲದೆ ಜೋಳ, ಬಟಾಣಿ, ಹತ್ತಿ, ಏಲಕ್ಕಿ, ಅಡಿಕೆ ಇತ್ಯಾದಿಗಳನ್ನು ಜೈವಿಕವಾಗಿ ನಿಯಂತ್ರಿಸಬಹುದು ಎಂದು ಸಂಶೋಧನೆಗಳು ತೋರಿಸಿಕೊಟ್ಟಿವೆ. ಸಂಶೋಧನೆ ಇನ್ನೂ ಮುಂದುವರೆದಿದ್ದು, ಭವಿಷ್ಯದಲ್ಲಿ ಹೆಚ್ಚಿನ ಯಶಸ್ಸು ಮತ್ತು ಪ್ರಯೋಜನಗಳ ಭರವಸೆಯಲ್ಲಿದ್ದೇವೆ. ಪ್ರಯೋಜನಾತ್ಮಕ ಕೀಟಗಳ ಮೂಲಕ ಹಾನಿಕಾರಕ ಇತರ ಕೀಟಗಳನ್ನು ನಾಶಪಡಿಸಿ ಚಹಾ ತೋಟವನ್ನು ರಕ್ಷಿಸುವ ಮತ್ತು ಚಹಾದಲ್ಲಿ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದ್ದೇವೆ. ಇದಕ್ಕೆ ಟೊಕ್ಲೈ ಸಂಶೋಧನಾ ಕೇಂದ್ರ ಸಂಶೋಧನಾ ಕ್ಷೇತ್ರದಲ್ಲಿ ಮತ್ತೊಂದು ಹೊಸ ಹೆಜ್ಜೆಯಿರಿಸಿದೆ" ಎಂದು ಮೃದುಲ್ ಶರ್ಮಾ ಮಾಹಿತಿ ನೀಡಿದರು.