ನವದೆಹಲಿ: ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
"ನಾಳೆ ಡಾ.ಮನಮೋಹನ್ ಸಿಂಗ್ ಅವರ ಅಂತಿಮ ವಿಧಿವಿಧಾನಗಳು ನಡೆಯಲಿರುವ ಸ್ಥಳವನ್ನು ದೇಶದ ಮಹಾನ್ ಪುತ್ರನ ಸ್ಮಾರಕವನ್ನಾಗಿಸುವ ಕುರಿತು ಪ್ರಧಾನಿ ಮೋದಿ ಅವರ ಜೊತೆ ಇಂದು ಬೆಳಗ್ಗೆ ಮಾತನಾಡಿದ್ದೇನೆ" ಎಂದು ಖರ್ಗೆ ತಿಳಿಸಿದ್ದಾರೆ.
"ರಾಷ್ಟ್ರನಾಯಕರು ಮತ್ತು ಮಾಜಿ ಪ್ರಧಾನಿಗಳ ಅಂತ್ಯಕ್ರಿಯೆಯ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ನಿರ್ಮಾಣ ಮಾಡುವ ಸಂಪ್ರದಾಯವಿದೆ. ಅದರಂತೆ ಸ್ಮಾರಕ ನಿರ್ಮಾಣದ ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಯಬೇಕು" ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಮನಮೋಹನ್ ಸಿಂಗ್ ಅವರು ದೇಶದ ಜನರ ಮನಸ್ಸಿನಲ್ಲಿ ಅತ್ಯಂತ ಗೌರವಾನ್ವಿತ ಸ್ಥಾನ ಹೊಂದಿದ್ದಾರೆ. ಅವರ ಕೊಡುಗೆಗಳು ಮತ್ತು ಸಾಧನೆಗಳು ಅಸಾಧಾರಣವಾಗಿವೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿ, ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ, ಪ್ರಧಾನಿಯಾಗಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ಭಾರತದ ಪ್ರಧಾನಿ ಮಾತನಾಡುವಾಗ, ಇಡೀ ಜಗತ್ತು ಅವರ ಮಾತನ್ನು ಕೇಳಿಸಿಕೊಳ್ಳುತ್ತೆ ಎಂದು ಹೇಳಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಒರಾಕ್ ಒಬಾಮಾ ಅವರ ಮಾತನ್ನು ಖರ್ಗೆ ಪ್ರಸ್ತಾಪಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಸಂತಾಪ ಸೂಚಕ ನಿರ್ಣಯ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಸಂತಾಪ ಸೂಚಕ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.
ಪಕ್ಷದ ಕಚೇರಿಯಲ್ಲಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ಸೋನಿಯಾ ಗಾಂಧಿ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಭಾಗಿಯಾಗಿದ್ದರು.
ಡಾ.ಮನಮೋಹನ್ ಸಿಂಗ್ ಅವರ ಅಗಲಿಕೆಗೆ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಸಂತಾಪ ಸೂಚಿಸಿತು. ಡಾ. ಸಿಂಗ್ ಅವರು ಭಾರತದ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರದ ಅಗ್ರಗಣ್ಯ ನಾಯಕರಾಗಿದ್ದರು. ಅವರ ಕೊಡುಗೆಗಳು ದೇಶವನ್ನು ಬದಲಾಯಿಸಿದ್ದಲ್ಲದೇ 1990ರ ದಶಕದ ಆರಂಭದಲ್ಲಿ ಅವರಿಗೆ ವಿಶ್ವಾದ್ಯಂತ ಗೌರವವನ್ನು ತಂದುಕೊಟ್ಟಿತು. ಡಾ.ಸಿಂಗ್ ಭಾರತದ ಆರ್ಥಿಕ ಉದಾರೀಕರಣದ ಶಿಲ್ಪಿ, ಖಾಸಗೀಕರಣ ಮತ್ತು ವಿದೇಶಿ ಹೂಡಿಕೆಯ ಉತ್ತೇಜನದ ನೀತಿಗಳ ಮೂಲಕ ಜಾಗತಿಕ ಮಾರುಕಟ್ಟೆಗಳಿಗೆ ಭಾರತ ಬಾಗಿಲು ತೆರೆದು ಕ್ಷಿಪ್ರ ಆರ್ಥಿಕ ಬೆಳವಣಿಗೆಗೆ ಅಡಿಪಾಯ ಹಾಕಿದರು. ಇದರಿಂದ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿ ಹೊರಹೊಮ್ಮಿತು ಎಂದು ಮನಮೋಹನ್ ಸಿಂಗ್ ಅವರನ್ನು ಕಾಂಗ್ರೆಸ್ ಸ್ಮರಿಸಿದೆ.
ಇದನ್ನೂ ಓದಿ: ಡಾ. ಮನಮೋಹನ್ ಸಿಂಗ್ ನೀಲಿ ಬಣ್ಣದ ಪೇಟವನ್ನೇ ಏಕೆ ಧರಿಸುತ್ತಿದ್ದರು?; ಕಾರಣ ಬಹಿರಂಗ ಪಡಿಸಿದ್ದ 'ಬ್ಲೂ ಟರ್ಬನ್'!
ಇದನ್ನೂ ಓದಿ: ಆರ್ಥಿಕ ತಜ್ಞನ ರಾಜಕೀಯ ಹಾದಿ: 33 ವರ್ಷ ರಾಜ್ಯಸಭಾ ಸದಸ್ಯ, ಮೊದಲ ಲೋಕಸಭಾ ಚುನಾವಣೆಯಲ್ಲೇ ಸೋತಿದ್ದೇಕೆ?