ಕರ್ನಾಟಕ

karnataka

ETV Bharat / bharat

ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ದರೋಡೆ ಪ್ರಕರಣ: ಇಬ್ಬರು ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿದ ಯುಪಿ ಪೊಲೀಸರು - ROBBERS KILLED IN ENCOUNTERS

ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ ದರೋಡೆಯಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಲಖನೌ ಮತ್ತು ಘಾಜಿಪುರದಲ್ಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ.

2 accused in Lucknow bank heist killed in encounters: UP Police
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ದರೋಡೆ ಪ್ರಕರಣ: ಇಬ್ಬರು ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿದ ಯುಪಿ ಪೊಲೀಸರು (ETV Bharat)

By ETV Bharat Karnataka Team

Published : Dec 24, 2024, 12:47 PM IST

ಲಖನೌ/ಗಾಜಿಪುರ: ಲಖನೌದ ಚಿನ್‌ಹಾಟ್‌ನಲ್ಲಿರುವ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ ಕಳ್ಳತನ ಮಾಡಿದ್ದ ಗ್ಯಾಂಗ್‌ನ ಇಬ್ಬರು ಆರೋಪಿಗಳನ್ನು ಉತ್ತರಪ್ರದೇಶ ಪೊಲೀಸರು ಎನ್​ ಕೌಂಟರ್​ ಮಾಡಿದ್ದಾರೆ. ಇವರನ್ನು ಸೋಬಿಂದ್ ಕುಮಾರ್ ಮತ್ತು ಸನ್ನಿ ದಯಾಲ್ ಎಂದು ಗುರುತಿಸಲಾಗಿದೆ. ಲಖನೌ ಮತ್ತು ಘಾಜಿಪುರದಲ್ಲಿ ಈ ಎನ್​ ಕೌಂಟರ್​ ನಡೆದಿದೆ. ಇಬ್ಬರೂ ದುಷ್ಕರ್ಮಿಗಳು ಬಿಹಾರದ ಮುಂಗೇರ್ ನಿವಾಸಿಗಳು ಎಂದು ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಲಖನೌ ಬ್ಯಾಂಕ್ ಕಳ್ಳತನದಲ್ಲಿ ಭಾಗಿಯಾಗಿರುವ ಆರೋಪಿಗಳು ಕಿಸಾನ್ ಪಥ್ ಮೂಲಕ ಸಾಗುತ್ತಿರುವ ಬಗ್ಗೆ ಯುಪಿ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು. ಸೋಮವಾರ ರಾತ್ರಿ, ಚಿನ್ಹತ್ ಪೊಲೀಸ್ ಮತ್ತು ಅಪರಾಧ ವಿಭಾಗದ ತಂಡವು ಮುತ್ತಿಗೆ ಹಾಕಿ ದುಷ್ಕರ್ಮಿಗಳನ್ನು ಬಂಧಿಸಲು ಪ್ರಯತ್ನಿಸಿತು. ಆದರೆ, ಆರೋಪಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಪೊಲೀಸರು ಹಾರಿಸಿದ ಗುಂಡಿಗೆ ದುಷ್ಕರ್ಮಿಯೊಬ್ಬ ಗಾಯಗೊಂಡಿದ್ದು, ಅವರನ್ನು ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಆರೋಪಿಯನ್ನು ಸೋಬಿಂದ್ ಕುಮಾರ್ ಎಂದು ಗುರುತಿಸಲಾಗಿದೆ. ಈತನಿಂದ 25,000 ರೂ. ಹಾಗೂ ಅಪಾರ ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೋಬಿಂದ್ ಬಿಹಾರದ ಮುಂಗೇರ್ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

ಘಾಜಿಪುರದಲ್ಲಿ ಮತ್ತೊಬ್ಬ ಆರೋಪಿ ಎನ್​​​ಕೌಂಟರ್​;ಮತ್ತೊಂದು ಕಡೆ ಬ್ಯಾಂಕ್ ಕಳ್ಳತನದಲ್ಲಿ ಭಾಗಿಯಾಗಿದ್ದ ಸನ್ನಿ ದಯಾಳ್​ ನನ್ನು ಮಂಗಳವಾರ ಮುಂಜಾನೆ ಗಾಜಿಪುರ ಪೊಲೀಸರು ಎನ್ ಕೌಂಟರ್​ ಮಾಡಿದ್ದಾರೆ. ತಪಾಸಣೆ ವೇಳೆ ಇಬ್ಬರು ಶಂಕಿತರು ಬೈಕ್‌ನಲ್ಲಿ ಮುಖವನ್ನು ಮರೆ ಮಾಚಿಕೊಂಡು ತೆರಳುತ್ತಿರುವುದು ಬಾರಾ ಔಟ್‌ಪೋಸ್ಟ್ ಬಳಿ ಕಂಡುಬಂದಿತ್ತು. ಈ ವೇಳೆ, ಶಂಕಿತರನ್ನು ತಡೆಯಲು ಪ್ರಯತ್ನಿಸಲಾಗಿತ್ತು. ಆದರೆ, ಇಬ್ಬರೂ ಪೊಲೀಸರ ಮೇಲೆಯೇ ಬೈಕ್​ ಹತ್ತಿಸಲು ನೋಡಿದ್ದರು. ಆ ಬಳಿಕ ಅವರು ಬಿಹಾರ ಗಡಿಯತ್ತ ಅತಿವೇಗದಲ್ಲಿ ಎಸ್ಕೇಪ್​ ಆಗುತ್ತಿದ್ದರು. ಈ ವೇಳೆ ಪೊಲೀಸರು ಅವರನ್ನು ಚೇಸ್​ ಮಾಡಿದರು, ಆಗ ಇಬ್ಬರೂ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ್ದಾರೆ. ಪ್ರತಿಯಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಸನ್ನಿ ದಯಾಳ್ ಮೃತಪಟ್ಟಿದ್ದಾನೆ. ಈ ವೇಳೆ ಸನ್ನಿ ದಯಾಳ್ ನಿಂದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.

ಬ್ಯಾಂಕ್ ನಲ್ಲಿ ಕಳ್ಳತನ ಮಾಡಿರುವ ಎಲ್ಲ ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿ ಅಮಿತಾಬ್ ಯಶ್ ತಿಳಿಸಿದ್ದಾರೆ.

ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ ನಲ್ಲಿ ಲಾಕರ್​​​​​​​​​ಗಳ ಕಳ್ಳತನ:ಶನಿವಾರ ಲಖನೌದ ಚಿನ್‌ಹತ್‌ನಲ್ಲಿರುವ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗೆ ನುಗ್ಗಿ 42 ಲಾಕರ್‌ಗಳನ್ನು ಲೂಟಿ ಮಾಡಲಾಗಿತ್ತು. ಬ್ಯಾಂಕ್ ನಲ್ಲಿ ನಡೆದ ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಒಂದು ಗಂಟೆಗೂ ಹೆಚ್ಚು ಕಾಲ ದುಷ್ಕರ್ಮಿಗಳು ಬ್ಯಾಂಕ್ ಒಳಗೆ ಇದ್ದು ಕಳ್ಳತನ ಮಾಡಿರುವುದು ಬಯಲಾಗಿತ್ತು. ಭಾನುವಾರ ಬೆಳಗ್ಗೆ ಬ್ಯಾಂಕ್ ಗೆ ರಜೆ ಇದ್ದುದರಿಂದ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಮಧ್ಯಾಹ್ನದ ವೇಳೆಗೆ ಅಕ್ಕಪಕ್ಕದ ಜನರು ಬ್ಯಾಂಕಿನ ಹಿಂಭಾಗದ ಗೋಡೆ ಕೊರೆದಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಭಾನುವಾರ ತಡರಾತ್ರಿ ಪೊಲೀಸರು ಚಿನ್ಹತ್‌ನ ಲೌಲೈ ಗ್ರಾಮದ ಬಳಿ ಕಳ್ಳತನದಲ್ಲಿ ಭಾಗಿಯಾಗಿದ್ದ ಮೂವರು ಅಪರಾಧಿಗಳನ್ನು ಬಂಧಿಸಿದ್ದರು. ಈ ವೇಳೆ ಕ್ರಿಮಿನಲ್ ಅರವಿಂದ್ ನನ್ನು ಪೊಲೀಸರು ಎನ್ ಕೌಂಟರ್ ಮಾಡಿದ್ದರು. ಮತ್ತೊಬ್ಬ ಆರೋಪಿ ಗಾಯಗೊಂಡಿದ್ದ. ಈ ಸಂದರ್ಭದಲ್ಲಿ ಬಿಹಾರದ ಮುಂಗೇರ್ ನಿವಾಸಿಗಳಾದ ಅರವಿಂದ್, ಬಲರಾಮ್ ಮತ್ತು ಕೈಲಾಶ್ ಬಿಂದ್ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಸುಮಾರು ಒಂದು ಕಿಲೋಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಕಡೆ ಅರವಿಂದ್ ಸಹಚರರು ಹಾಗೂ ಇನ್ನೊಂದು ಕಾರಿನಲ್ಲಿ ತೆರಳುತ್ತಿದ್ದ ದುಷ್ಕರ್ಮಿಗಳು ಪರಾರಿಯಾಗಿದ್ದರು.

ಇದನ್ನು ಓದಿ:IOB ಬ್ಯಾಂಕ್‌ಗೆ ನುಗ್ಗಿ ಹಲವು ಲಾಕರ್‌ಗಳನ್ನು ದರೋಡೆ ಮಾಡಿದ ದುಷ್ಕರ್ಮಿಗಳು: ತನಿಖೆ ಚುರುಕು

ಬೋರ್‌ವೆಲ್‌ನಲ್ಲಿ ಸಿಲುಕಿದ್ದ ಐದು ವರ್ಷದ ಬಾಲಕ ಆಸ್ಪತ್ರೆಯಲ್ಲಿ ಸಾವು: ಫಲ ನೀಡಲಿಲ್ಲ 55 ಗಂಟೆಗಳ ಕಾರ್ಯಾಚರಣೆ

ABOUT THE AUTHOR

...view details