ಬಲ್ಲಿಯಾ (ಉತ್ತರಪ್ರದೇಶ):ವಿವಾಹ ಕಾರ್ಯಕ್ರಮದ ಹಿನ್ನೆಲೆ ನಡೆದ ತಿಲಕೋತ್ಸವದಲ್ಲಿ ಪಾಲ್ಗೊಂಡು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಎರಡು ಕಾರಿಗೆ ಪಿಕಪ್ ವಾಹನ ರಭಸವಾಗಿ ಡಿಕ್ಕಿ ಹೊಡೆದು, ಸ್ಥಳದಲ್ಲೇ ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ದುರ್ಮರಣಕ್ಕೀಡಾದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. 9 ಮಂದಿ ಗಾಯಗೊಂಡಿದ್ದು, ವಾರಣಾಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲೆಯ ಬೈರಿಯಾ ಪ್ರದೇಶದಲ್ಲಿ ವಿವಾಹ ಕಾರ್ಯಕ್ರಮದ ತಿಲಕೋತ್ಸವ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಮುಗಿಸಿಕೊಂಡು ಕುಟುಂಬಸ್ಥರು ಸುಗರ್ ಛಾಪ್ರಾ ತಿರುವಿನ ಬಳಿ ಎರಡು ಕಾರುಗಳಲ್ಲಿ ಬರುತ್ತಿದ್ದಾಗ ಎದುರಿನಿಂದ ಬಂದ ಪಿಕಪ್ ವಾಹನ ರಭಸವಾಗಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದವರ ಪೈಕಿ 2 ಮಕ್ಕಳು ಸೇರಿದಂತೆ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಎಲ್ಲರನ್ನೂ ವಾರಣಾಸಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ದೇವರಂಜನ್ ವರ್ಮಾ ಅವರು ನೀಡಿದ ಮಾಹಿತಿಯಂತೆ, ಭಗವಾನ್‌ಪುರ ನಿವಾಸಿ ಅನ್ವತ್ ಗುಪ್ತಾ ಅವರ ಪುತ್ರಿಯ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೋಮವಾರ ತಿಲಕೋತ್ಸವ ನಡೆಯಿತು. ಸಂಜೆ ಕುಟುಂಬದವರು ಇತರ ಸಂಬಂಧಿಕರೊಂದಿಗೆ ಖೇಜೂರಿ ಪೊಲೀಸ್ ಠಾಣೆಯ ಮಸುಂಪುರಕ್ಕೆ ತೆರಳುತ್ತಿದ್ದರು. ಎರಡು ಕಾರುಗಳಲ್ಲಿ ಬರುತ್ತಿದ್ದಾಗ ಬೈರಿಯಾ ಪ್ರದೇಶದ ಸುಗರ್ ಛಾಪ್ರಾ ತಿರುವಿನ ಬಳಿ ಎದುರುಗಡೆಯಿಂದ ಬಂದ ಪಿಕಪ್ ವಾಹನ ಎರಡೂ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ನಿಖರವಾದ ಕಾರಣ ಏನು ಎಂಬ ಬಗ್ಗೆ ತನಿಖೆ ನಂತರ ತಿಳಿದುಬರಲಿದೆ ಎಂದು ಹೇಳಿದ್ದಾರೆ.
ಅಪಘಾತದಲ್ಲಿ ಭಗವಾನ್‌ಪುರ ನಿವಾಸಿ ಅಮಿತ್ ಗುಪ್ತಾ, ರಂಜಿತ್ ಶರ್ಮಾ, ಯಶ್ ಗುಪ್ತಾ, ರಾಜ್ ಗುಪ್ತಾ, ಧನಪತಿ ಗುಪ್ತಾ ಮತ್ತು ಒಬ್ಬ ಕಾರು ಚಾಲಕ ಸಾವನ್ನಪ್ಪಿದ್ದಾರೆ. ರಾಜೇಂದ್ರ ಶಾ, ಸುಭಾಷ್ ಗುಪ್ತಾ, ರಾಮಶಂಕರ್, ಬಬ್ಬನ್ ಪ್ರಸಾದ್, ಬಾಲೇಶ್ವರ ಪ್ರಸಾದ್, ಹಜಾರಿ ಸಾಹು, ಚಿತೇಶ್ವರ್ ಗುಪ್ತಾ, ಪಂಕಜ್ ಕುಮಾರ್, ಅಮಿತ್ ಕುಮಾರ್ ಗಾಯಗೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಮೊದಲು ಜಿಲ್ಲಾಸ್ಪತ್ರೆಗೆ ರವಾನಿಸಿದರು. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾದ ಕಾರಣ ಅವರನ್ನು ವಾರಣಾಸಿಗೆ ಕಳುಹಿಸಲಾಯಿತು. ರಾತ್ರಿಯೇ ಆಸ್ಪತ್ರೆಗೆ ಆಗಮಿಸಿದ ಎಸ್ಪಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಘಟನೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ಅಪರಾಧಿಗಳಿಬ್ಬರಿಗೆ 20 ವರ್ಷ ಜೈಲುಶಿಕ್ಷೆ