ನವದೆಹಲಿ:ದೀರ್ಘಕಾಲದ ಅನಾರೋಗ್ಯಕ್ಕೀಡಾಗಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಗುರುವಾರ ನಿಧನರಾದರು ಎಂದು ಆಸ್ಪತ್ರೆ ಮತ್ತು ಪಕ್ಷದ ಮೂಲಗಳು ತಿಳಿಸಿವೆ. ಕಳೆದ ಕೆಲವು ದಿನಗಳಿಂದ ರಾಜಕೀಯ ಕ್ಷೇತ್ರದ ಹಿರಿಯ ನಾಯಕರ ಆರೋಗ್ಯ ಕ್ಷೀಣಿಸಿತ್ತು. ಇಲ್ಲಿನ ಏಮ್ಸ್ನಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಗುರುವಾರ ಮಧ್ಯಾಹ್ನ 3.05 ಕ್ಕೆ ಕೊನೆಯುಸಿರೆಳೆದರು ಎಂದು ಪಕ್ಷ ತಿಳಿಸಿದೆ.
ಯೆಚೂರಿ ರಾಜಕೀಯ ಪಯಣ:ಯೆಚೂರಿ ಅವರು ಆಗಸ್ಟ್ 12, 1952 ರಂದು ಚೆನ್ನೈನಲ್ಲಿ ಜನಿಸಿದರು. ಬಳಿಕ ಅವರ ಕುಟುಂಬ ಆಂಧ್ರಪ್ರದೇಶದ ಅಂದಿನ ರಾಜಧಾನಿ ಹೈದರಾಬಾದ್‌ಗೆ ವರ್ಗವಾಯಿತು. ತಂದೆ ಸರ್ವೇಶ್ವರ ಸೋಮಯಾಜುಲ ಯೆಚೂರಿ ಅವರು ಆಂಧ್ರಪ್ರದೇಶ ರಾಜ್ಯ ರಸ್ತೆ ನಿಗಮದ ಎಂಜಿನಿಯರ್ ಆಗಿದ್ದರು. ಅವರ ತಾಯಿ ಕಲ್ಪಕಂ ಯೆಚೂರಿ ಸರ್ಕಾರಿ ಅಧಿಕಾರಿಯಾಗಿದ್ದರು. 1969 ರ ತೆಲಂಗಾಣ ಆಂದೋಲನದ ನಂತರ ಯೆಚೂರಿ ದೆಹಲಿಗೆ ಸ್ಥಳಾಂತರಗೊಂಡರು. ಅಲ್ಲಿಯೇ ಉನ್ನತ ಶಿಕ್ಷಣ ಪೂರೈಸಿದರು. ಶಾಲಾ ದಿನಗಳಲ್ಲಿ ಕಮ್ಯುನಿಸ್ಟ್ ಚಳವಳಿಯಿಂದ ಪ್ರಭಾವಿತರಾಗಿದ್ದರು.
1973 ರಲ್ಲಿ ಅವರು ದೆಹಲಿ ವಿಶ್ವವಿದ್ಯಾನಿಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿಎ ಪೂರ್ಣಗೊಳಿಸಿದರು. ಬಳಿಕ ಭಾರತೀಯ ವಿದ್ಯಾರ್ಥಿಗಳ ಒಕ್ಕೂಟಕ್ಕೆ (SFI) ಸೇರಿದರು. ಇದಾದ ನಂತರ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)ಗೆ ಸೇರಿದರು. 1975 ರಲ್ಲಿ ಅವರು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ (ಜೆಎನ್‌ಯು) ಅರ್ಥಶಾಸ್ತ್ರದಲ್ಲಿ ತಮ್ಮ ಎಂಎ ಸ್ನಾಯಕೋತ್ತರ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪೂರ್ಣಗೊಳಿಸಿದರು. ತರುವಾಯ, ಅವರು ಪಿಹೆಚ್‌ಡಿಗಾಗಿ ಜೆಎನ್‌ಯು ಸೇರಿದರು. ಆದ್ರೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬಂಧನವಾದ ಕಾರಣ ಪದವಿ ಪೂರ್ಣಗೊಳ್ಳಲಿಲ್ಲ.
1977-78ರ ಅವಧಿಯಲ್ಲಿ ಭೂಗತರಾದರು. ತುರ್ತು ಪರಿಸ್ಥಿತಿಯ ನಂತರ, (1977-78) ಮೂರು ಬಾರಿ ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರಕಾಶ್ ಕಾರಟ್ ಅವರೊಂದಿಗೆ ಜೆಎನ್‌ಯುನಲ್ಲಿ ಎಡಪಂಥೀಯ ವಿಚಾರಧಾರೆಯನ್ನು ಬೆಳೆಸಿದರು.