ಇಂದೋರ್ : ವಿವಾದಿತ ಭೋಜಶಾಲಾ-ಕಮಲ್-ಮೌಲಾ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ)ಯು ಸೋಮವಾರ ಮಧ್ಯಪ್ರದೇಶ ಹೈಕೋರ್ಟ್ನ ಇಂದೋರ್ ಪೀಠಕ್ಕೆ ಸಲ್ಲಿಸಿದೆ. ಎಎಸ್ಐ ಪರ ವಕೀಲ ಹಿಮಾಂಶು ಜೋಶಿ ಅವರು 2,000 ಪುಟಗಳ ವರದಿಯನ್ನು ಹೈಕೋರ್ಟ್ನ ರಿಜಿಸ್ಟ್ರಿಗೆ ಹಸ್ತಾಂತರಿಸಿದರು.
"ನಾನು ವರದಿಯನ್ನು ಸಲ್ಲಿಸಿದ್ದೇನೆ. ಹೈಕೋರ್ಟ್ ಜುಲೈ 22 ರಂದು ಪ್ರಕರಣದ ವಿಚಾರಣೆ ನಡೆಸಲಿದೆ" ಎಂದು ಜೋಶಿ ದೂರವಾಣಿ ಮೂಲಕ ಪಿಟಿಐಗೆ ತಿಳಿಸಿದರು.
ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ವಾಗ್ವಾದದ ವಿಷಯವಾಗಿರುವ ವಿವಾದಿತ 11 ನೇ ಶತಮಾನದ ಸ್ಮಾರಕದ ಆವರಣದಲ್ಲಿ ಸುಮಾರು ಮೂರು ತಿಂಗಳ ಕಾಲ ನಡೆದ ಸಮೀಕ್ಷೆಯ ಸಂಪೂರ್ಣ ವರದಿಯನ್ನು ಜುಲೈ 15 ರೊಳಗೆ ಸಲ್ಲಿಸುವಂತೆ ಹೈಕೋರ್ಟ್ ಜುಲೈ 4 ರಂದು ಎಎಸ್ಐಗೆ ಆದೇಶಿಸಿತ್ತು.
ಹಿಂದೂ ಸಮುದಾಯವು ಭೋಜಶಾಲಾವನ್ನು ವಾಗ್ದೇವಿ (ಸರಸ್ವತಿ ದೇವಿ) ದೇವಾಲಯವೆಂದು ಪರಿಗಣಿಸಿದರೆ, ಮುಸ್ಲಿಂ ಕಡೆಯವರು ಇದನ್ನು ಕಮಲ್ ಮೌಲಾ ಮಸೀದಿ ಎಂದು ಕರೆಯುತ್ತಾರೆ. 'ಹಿಂದೂ ಫ್ರಂಟ್ ಫಾರ್ ಜಸ್ಟೀಸ್' ಸಂಘಟನೆಯು ಸಲ್ಲಿಸಿದ ಅರ್ಜಿಯ ಮೇರೆಗೆ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಪುರಾತತ್ವ ಸಂಶೋಧನೆ ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆಯ ದೇಶದ ಪ್ರಮುಖ ಸಂಸ್ಥೆಯಾದ ಎಎಸ್ಐಗೆ ಹೈಕೋರ್ಟ್ ಮಾರ್ಚ್ 11 ರಂದು ಆದೇಶಿಸಿತ್ತು.
ಸಮೀಕ್ಷೆಯನ್ನು ಪೂರ್ಣಗೊಳಿಸಲು ಎಎಸ್ಐಗೆ ಆರು ವಾರಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಎಎಸ್ಐ ವರದಿ ಸಲ್ಲಿಸಲು ಹೆಚ್ಚಿನ ಕಾಲಾವಕಾಶವನ್ನು ಕೋರಿತ್ತು. ಎಎಸ್ಐ ಮಾರ್ಚ್ 22 ರಂದು ವಿವಾದಿತ ಸಂಕೀರ್ಣದ ಸಮೀಕ್ಷೆಯನ್ನು ಪ್ರಾರಂಭಿಸಿತ್ತು ಹಾಗೂ ಅದು ಇತ್ತೀಚೆಗೆ ಕೊನೆಗೊಂಡಿದೆ.
ಈ ಹಿಂದೆ ವಿವಾದ ಭುಗಿಲೆದ್ದ ನಂತರ ಸ್ಮಾರಕದ ಪ್ರವೇಶಕ್ಕೆ ಸಂಬಂಧಿಸಿದಂತೆ ಎಎಸ್ಐ ಏಪ್ರಿಲ್ 7, 2003 ರಂದು ನಿರ್ಬಂಧಕ ಆದೇಶ ಹೊರಡಿಸಿತ್ತು. ಕಳೆದ 21 ವರ್ಷಗಳಿಂದ ಜಾರಿಯಲ್ಲಿರುವ ಈ ಆದೇಶದ ಪ್ರಕಾರ, ಹಿಂದೂಗಳಿಗೆ ಮಂಗಳವಾರ ಭೋಜಶಾಲಾದಲ್ಲಿ ಪೂಜಿಸಲು ಅವಕಾಶ ನೀಡಲಾಗಿದೆ. ಹಾಗೆಯೇ ಮುಸ್ಲಿಮರಿಗೆ ಶುಕ್ರವಾರ ಈ ಸ್ಥಳದಲ್ಲಿ ನಮಾಜ್ ಮಾಡಲು ಅವಕಾಶವಿದೆ. ಹಿಂದೂ ಫ್ರಂಟ್ ಫಾರ್ ಜಸ್ಟೀಸ್ ತನ್ನ ಅರ್ಜಿಯಲ್ಲಿ ಈ ವ್ಯವಸ್ಥೆಯನ್ನು ಪ್ರಶ್ನಿಸಿದೆ.
ಭೋಜಶಾಲೆಯ ಇತಿಹಾಸವು ನೂರಾರು ವರ್ಷಗಳಷ್ಟು ಹಳೆಯದಾಗಿದೆ. ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿಯೂ ಎಎಸ್ಐ ಭೋಜಶಾಲಾದಲ್ಲಿ ಸಮೀಕ್ಷೆ ನಡೆಸಿತ್ತು. ಆ ಕಾಲದ ವರದಿಯಲ್ಲಿ, ದೇವಾಲಯದ ಹೊರತಾಗಿ, ಸಂಕೀರ್ಣದ ಒಂದು ಭಾಗದಲ್ಲಿ ಮಸೀದಿ ಇರುವುದನ್ನು ಸಹ ಉಲ್ಲೇಖಿಸಲಾಗಿದೆ. ಪ್ರಸ್ತುತ ಹೊಸ ಅರ್ಜಿಯ ವಿಚಾರಣೆಯ ಸಮಯದಲ್ಲಿ, ಹೈಕೋರ್ಟ್ ಹೊಸ ಸಮೀಕ್ಷೆಗೆ ನಿರ್ದೇಶನ ನೀಡಿತ್ತು.
ಇದನ್ನೂ ಓದಿ :ಇನ್ಮುಂದೆ ಸ್ಕ್ರ್ಯಾಪ್ ಆಗಲಿವೆ 15 ವರ್ಷ ಹಳೆಯ ವಾಹನಗಳು: ಏನಿದು ಹೊಸ ನೀತಿ? ಇಲ್ಲಿದೆ ಫುಲ್ ಡೀಟೇಲ್ಸ್ - HOW TO WORK VEHICLE SCRAP POLICY