ಲಖನೌ: I.N.D.I.A ಮೈತ್ರಿಕೂಟದ ಅಡಿ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಡುವೆ ಉತ್ತರಪ್ರದೇಶದಲ್ಲಿ ಸೀಟಗಳ ಹಂಚಿಕೆ ಒಪ್ಪಂದಕ್ಕೆ ಬರಲಾಗಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಶನಿವಾರ ಟ್ವೀಟ್ ಮೂಲಕ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಒಪ್ಪಂದದ ಪ್ರಕಾರ, ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶದಲ್ಲಿ 11 ಸ್ಥಾನಗಳಲ್ಲಿ ಚುನಾವಣೆ ಎದುರಿಸಲಿದೆ. ಈ ಹಿಂದೆಯೇ ಅಖಿಲೇಶ್ ಯಾದವ್ ಅವರು ಹೇಳಿದಂತೆ ಮಿತ್ರ ಪಕ್ಷ ರಾಷ್ಟ್ರೀಯ ಲೋಕದಳಕ್ಕೆ 7 ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದ್ದರು. ಇನ್ನುಳಿದ 62 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಇದರಲ್ಲಿ ಒಂದು ಅಥವಾ ಎರಡು ಸ್ಥಾನಗಳನ್ನು ಇತರ ಮಿತ್ರ ಪಕ್ಷಗಳಿಗೆ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಕಾಂಗ್ರೆಸ್, ರಾಷ್ಟ್ರೀಯ ಲೋಕದಳ, ಅಪ್ನಾ ದಳ, ಆಜಾದ್ ಸಮಾಜ ಪಕ್ಷಗಳು ಒಟ್ಟಾಗಿ ಲೋಕಸಭೆ ಚುನಾವಣೆ ಎದುರಿಸಲಿವೆ. ಈ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಹಿರಿಯ ನಾಯಕರ ನಡುವೆ ದೆಹಲಿಯಲ್ಲಿ ಸೀಟು ಹಂಚಿಕೆ ಸೂತ್ರದ ಕುರಿತು ಚರ್ಚೆ ಸರಣಿ ಸಭೆಗಳು ನಡೆದಿದ್ದವು.