ಶ್ರೀನಗರ:ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಒಮರ್ ಅಬ್ಧುಲ್ಲಾ ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಇಂಡಿಯಾ ಒಕ್ಕೂಟದ ನಾಯಕರು ಭಾಗಿಯಾಗಲಿದ್ದಾರೆ. ಒಮರ್ ಅಬ್ಧುಲ್ಲಾ ಜೊತೆಗೆ ನ್ಯಾಷನಲ್ ಕಾನ್ಫರೆನ್ಸ್ನ ನಾಲ್ಕು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮೂಲಗಳ ಪ್ರಕಾರ, ಕಾಂಗ್ರೆಸ್ ಅಥವಾ ಸ್ವತಂತ್ರ ಶಾಸಕರು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವುದಿಲ್ಲ ಎಂಬುದಾಗಿ ತಿಳಿದು ಬಂದಿದೆ. ಒಮರ್ ಅಬ್ಧುಲ್ಲಾ ಜೊತೆಗೆ ಜಮ್ಮುವಿನ ರಜೌರಿ ಜಿಲ್ಲೆಯ ನೌಶೇರಾ ಕ್ಷೇತ್ರದ ಸುರೀಂದರ್ ಚೌಧರಿ ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರು ಬಿಜೆಪಿಯ ರವೀಂದರ್ ರೈನಾ ಅವರ ವಿರುದ್ಧ ಜಯಗಳಿಸಿದ್ದಾರೆ.
ಮತ್ತೊಬ್ಬ ಎನ್ಸಿ ಸದಸ್ಯ ಕುಲ್ಗಾಮ್ ಜಿಲ್ಲೆಯ ಡಿಎಚ್ ಪೋರಾ ಕ್ಷೇತ್ರದ ಸಕೀನಾ ಇಟೂ ಕೂಡ ಸ್ಥಾನ ಪಡೆಯಲಿದ್ದಾರೆ. ಇವರು ಈಗಾಗಲೇ ಈ ಹಿಂದಿನ ಫಾರೂಕ್ ಅಬ್ಧುಲ್ಲಾ ಮತ್ತು ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರಗಳಲ್ಲಿ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.
ಇದರ ಜೊತೆಗೆ ಎರಡು ಹೊಸ ಮುಖಗಳಿಗೆ ಕೂಡ ಮಣೆ ಹಾಕಲಾಗಿದ್ದು, ಅವರು ಕೂಡ ಇಂದು ಪ್ರಮಾಣ ವಚನೆ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಗೆಯೇ ಒಮರ್ ಅಬ್ದುಲ್ಲಾ ನೇತೃತ್ವದ ಹೊಸ ಸರ್ಕಾರದ ಸಂಪುಟದಲ್ಲಿ ಯಾವುದೇ ಹಿರಿಯ ನಾಯಕರು ಸ್ಥಾನಮಾನ ಪಡೆಯುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.