ಅಹಮದಾಬಾದ್:ಇತ್ತೀಚೆಗೆ ಮುಗಿದ ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದಂತೆಯೇ ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಶನಿವಾರ ಘೋಷಿಸಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕೇಂದ್ರದ ಪ್ರತಿಪಕ್ಷದದ ನಾಯಕ ರಾಹುಲ್ ಗಾಂಧಿ, ಗುಜರಾತ್‌ನಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಿಯೇ ಸೋಲಿಸುತ್ತೆ ಎಂದು ಹೇಳಿದ್ದಾರೆ. ಅವರು (ಬಿಜೆಪಿ) ನಮಗೆ ಬೆದರಿಕೆ ಹಾಕುವ ಮತ್ತು ನಮ್ಮ ಕಚೇರಿಗೆ ಹಾನಿ ಮಾಡುವ ಮೂಲಕ ಸವಾಲು ಹಾಕಿದ್ದಾರೆ. ನಮ್ಮ ಕಚೇರಿಗೆ ಹಾನಿ ಮಾಡಿದಂತೆ ನಾವು ಅವರ ಸರ್ಕಾರವನ್ನು ಕೆಡವಲು ಹೊರಟಿದ್ದೇವೆ ಎಂದು ನಾನು ನಿಮಗೆ ಹೇಳುತ್ತೇನೆ. ಗುಜರಾತ್‌ನಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತದೆ ಮತ್ತು ನರೇಂದ್ರ ಮೋದಿ ಅವರನ್ನು ಸೋಲಿಸಿಯೇ ಸೋಲಿಸುತ್ತೇವೆ ಎಂದು ಲಿಖಿತವಾಗಿ ಬರೆದುಕೊಡುತ್ತೇನೆ. ನಾವು ಅಯೋಧ್ಯೆಯಲ್ಲಿ ಮಾಡಿದಂತೆ ಗುಜರಾತ್‌ನಲ್ಲಿ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಜನರಿಗೆ ಭರವಸೆ ನೀಡಿದರು.
ಗುಜರಾತ್‌ನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಮತ್ತು ಆ ರಾಜ್ಯದಿಂದ ಹೊಸ ಆರಂಭ ಮಾಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಜುಲೈ 2 ರಂದು ಅಹಮದಾಬಾದ್‌ನ ಪಾಲ್ಡಿ ಪ್ರದೇಶದ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಚೇರಿಯಾದ ರಾಜೀವ್ ಗಾಂಧಿ ಭವನದ ಹೊರಗೆ ಬಿಜೆಪಿಯ ಯುವ ಘಟಕದ ಸದಸ್ಯರು ಹಿಂದೂಗಳ ಬಗ್ಗೆ ರಾಹುಲ್ ಮಾಡಿದ್ದ ಟೀಕೆಗಳಿಗೆ ವಿರೋಧ ವ್ಯಕ್ತಪಡಿಸಲು ಜಮಾಯಿಸಿದ್ದರು. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಸದಸ್ಯರ ನಡುವೆ ಘರ್ಷಣೆ ನಡೆದಿತ್ತು, ಈ ಘರ್ಷಣೆ ಬಗ್ಗೆ ರಾಹುಲ್ ಗಾಂಧಿ ಉಲ್ಲೇಖಿಸಿ ಮಾತನಾಡಿದರು. ಪೊಲೀಸರು ನೀಡಿರುವ ಪ್ರಕಾರ, ಎರಡೂ ಕಡೆಯವರು ಕಲ್ಲು ತೂರಾಟದಲ್ಲಿ ತೊಡಗಿದ್ದರು. ಈ ಘರ್ಷಣೆಯಲ್ಲಿ ಸಹಾಯಕ ಪೊಲೀಸ್ ಕಮಿಷನರ್ ಸೇರಿದಂತೆ ಐವರು ಪೊಲೀಸರು ಗಾಯಗೊಂಡಿದ್ದಾರೆ.